ವ್ಯಾಪಾರ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ವ್ಯಾಪಾರ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಓಲಾ ಉಬರ್ ಕ್ಯಾಬ್ / ಆಟೋ ಬೆಲೆ ಮಾಮೂಲಿಗಿಂತ ಜಾಸ್ತಿ ಯಾಕೆ?


ಓಲಾ ಉಬರ್ ಕ್ಯಾಬ್ / ಆಟೋ ಬೆಲೆ ಸಾಮಾನ್ಯ ಆಟೋ / ಕ್ಯಾಬ್ ಗಿಂತ ಜಾಸ್ತಿ ಯಾಕೆ? 

ಬನ್ನಿ ಈ ಲೇಖನದಲ್ಲಿ ವಿವರವಾಗಿ ಚರ್ಚೆ ಮಾಡೋಣ.

ಇತ್ತೀಚೆಗೆ ಓಲಾ / ಉಬರ್ ಗಳು ತಮ್ಮ ಪ್ಲಾಟ್ ಫಾರ್ಮ್ ಬಳಸಿದ ಸೇವೆಯ ಚಾರ್ಜ್ ಅನ್ನು ಪ್ರತ್ಯೇಕವಾಗಿ ಗ್ರಾಹಕರಿಗೆ ಬಿಲ್ ಅಲ್ಲಿ ತೋರಿಸಲಾಗುತ್ತಿದೆ. ಇದು ಮೋಸವೇ? ಸುಲಿಗೆಯೇ? ಬನ್ನಿ ನೋಡೋಣ.

ಒಂದೇ ಮಾತಲ್ಲಿ ಹೇಳುವದಾದರೆ ಪೂರ್ತಿ ಅಲ್ಲ. ಯಾಕೆ? 

ನಾವು ಓಲಾ, ಉಬರ್, ರೆಪಿಡೋ ಬಳಸುವಾಗ ಎರಡು ಸೇವೆಯನ್ನು ಬಳಸುತ್ತಿರುತ್ತೇವೆ. 

  1. ಆಟೋ / ಕ್ಯಾಬ್ ನ ಮೀಟರ್ ಆಧಾರಿತ ಸೇವೆ.
  2. ಓಲಾ / ಉಬರ್ ಕಂಪನಿಗಳ ಏಪ್ ಸೇವೆ.
ಆ ಎರಡು ಸೇವೆಗೆ ಪ್ರತ್ಯೇಕ ಚಾರ್ಜ್ ಇದೆ. ಅಷ್ಟೇ ಅಲ್ಲ ಚಾಲಕ ಮೊಬೈಲ್ / ಇಂಟರ್ನೆಟ್ ಗೆ ಹಣ ಖರ್ಚು ಮಾಡುತ್ತಾ ಇರಬೇಕು.

ಒಂದು ಆಟೋ / ಕ್ಯಾಬ್ ನ ಮೀಟರ್ ಆಧಾರಿತ ಸೇವೆ. ಏಕೆಂದರೆ ಆಟೋ / ಕ್ಯಾಬ್ ಚಾಲಕ ತಾನು ಎಷ್ಟು ದೂರ ಗಾಡಿ ಓಡಿಸಿದ್ದೇನೋ ಅಷ್ಟಕ್ಕೆ ಮೀಟರ್ ಬೆಲೆ ಅಪೇಕ್ಷಿಸುತ್ತಿರುತ್ತಾನೆ. 

ಇನ್ನೊಂದು ಈ ಕಂಪನಿಗಳ ಏಪ್ ಸೇವೆ. ಆಟೋ/ ಕ್ಯಾಬ್ ಚಾಲಕನಿಗೆ ನಮ್ಮ ಅಗತ್ಯ ತಿಳಿಸಿ, ಅವರಿಗೆ ನಾವಿರುವ ಜಾಗ ತೋರಿಸಿ ಕರೆತಂದು ಅಲ್ಲಿಂದ ನಾವು ಹೋಗಬೇಕಾದ ಕಡೆ ದಾರಿ ತೋರಿಸಿ ಒಯ್ದು ನಮಗೆ ಹಣ ಸಂದಾಯದ ಸೌಲಭ್ಯ, ವಿಮೆ ಸೌಲಭ್ಯ ಹೀಗೆ ನೀಡುವದು ಓಲಾ / ಉಬರ್ ಮಾಡುತ್ತವೆ. ಇದಕ್ಕೆ ಪೂರ್ತಿ ಕಂಪ್ಯೂಟರ್ ತಂತ್ರಜ್ಞಾನ ಬಳಕೆ ಆಗುತ್ತದೆ. ಇನ್ನು ಏನಾದರೂ ತಾಂತ್ರಿಕ ಸಮಸ್ಯೆ ಇದ್ದರೆ ಅದಕ್ಕೆ ಪರಿಹಾರ ನೀಡುತ್ತವೆ. ಇವೆಲ್ಲಕ್ಕೆ ಬೇರೆ ಖರ್ಚಿದೆ.

ನಿಜ ಕೆಲವರಿಗೆ ಅನ್ನಿಸಬಹುದು ಅದು ನಮ್ಮ ಫೋನ್ ಅಲ್ಲಿರುವ ಎಪ್ ಮಾಡುತ್ತದಲ್ಲ ಎಂದು. ಖಂಡಿತ ಅಲ್ಲ. ಆ ಎಪ್ ಹಿಂದೆ ದೂರದಿಂದ ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ಬಳಸಿ ನಮ್ಮ ಎಪ್ ಹಾಗೂ ಚಾಲಕನ ಎಪ್ ನಿಂದ ಮಾಹಿತಿ ಪಡೆದು ಸಂವಹನ ಮಾಡುವ ಕಂಪ್ಯೂಟರ್ ಸರ್ವರ್ ತಂತ್ರಜ್ಞಾನ ಇರುತ್ತದೆ.

ಆ ತಂತ್ರಜ್ಞಾನ ನಾವು ಎಪ್ ಓಪನ್ ಮಾಡಿ ಬುಕಿಂಗ್ ಆರಂಭದಿಂದ ಹಣ ಸಂದಾಯ ಮಾಡೀ ಟ್ರಿಪ್ ಮುಗಿಸುವವರೆಗೆ ಕೆಲಸ ಮಾಡುತ್ತಲೇ ಇರುತ್ತದೆ! ಇದರ ನಿರ್ಮಾಣ ಹಾಗೂ ನಿರ್ವಹಣೆಗೆ ವಿಪರೀತ ಖರ್ಚಾಗುತ್ತದೆ.

ಇದರ ಜೊತೆಗೆ ಗೂಗಲ್ ಮ್ಯಾಪ್ ನಂತಹ ಕಂಪನಿಗಳು ತಮ್ಮ ಮ್ಯಾಪ್ ಬಳಸಿದ್ದಕ್ಕೆ ಓಲಾ/ಉಬರ್ ಕಂಪನಿಗಳಿಗೆ ಹಣ ಚಾರ್ಜ್ ಮಾಡುತ್ತವೆ! ಗೂಗಲ್ ಮ್ಯಾಪ್ ನಮ್ಮಂತಹ ಗ್ರಾಹಕರು ಬಳಸಿದಾಗ ಉಚಿತ. ಕಂಪನಿಗಳು ಬಳಸಿದಾಗ ಬೇರೆ ಉಚಿತ ಸೇವೆಯ ಖರ್ಚು ಸೇರಿಸಿ ಚಾರ್ಜ್ ಮಾಡಲಾಗುತ್ತದೆ.

ಇನ್ನು ಚಾಲಕ ಕೂಡಾ ಮೊಬೈಲ್ / ಇಂಟರನೆಟ್ / ಕಂಪನಿ ಚಾರ್ಜ್ ಎಲ್ಲಾ ಎಕ್ಸ್ಟ್ರಾ ಕೊಡಬೇಕು.

ಆ ಸೇವೆಗೆ ಗ್ರಾಹಕನೋ ಅಥವಾ ಚಾಲಕನೋ ಅಥವಾ ಇಬ್ಬರೂ ತಕ್ಕ ಬೆಲೆ ತೆರಲೇ ಬೇಕು. ಅಲ್ವಾ?  ಬನ್ನಿ ಈ ವಿಷಯದ ಬಗ್ಗೆ ವಿವರವಾಗಿ ಚರ್ಚೆ ಮಾಡೋಣ. ಈ ಲೇಖನ ಪೂರ್ತಿ ಓದಿ.

ಓಲಾ / ಉಬರ್ ಸೇವೆ ಬರುವದಕ್ಕಿಂತ ಮುಂಚಿನ ಸಮಸ್ಯೆಗಳು

ಒಂದು ವ್ಯವಸ್ಥೆಯ ಅನುಕೂಲ ತಿಳಿಯಲು ಅದೂ ಇಲ್ಲದಿದ್ದಾಗ ಹೇಗಿತ್ತು ಅನ್ನುವದನ್ನು ಅರಿಯಬೇಕು.

ಓಲಾ / ಉಬರ್ ಬರುವದಕ್ಕಿಂತ ಮುಂಚೆ ನನ್ನಂತಹ ಗ್ರಾಹಕರಿಗೆ ಹಾಗೂ ಕ್ಯಾಬ್/ಆಟೋ ಚಾಲಕರಿಗೂ ಸಹ ಹಲವು ಸಮಸ್ಯೆಗಳಿದ್ದವು. ಆ ೧೪ ಸಮಸ್ಯೆಗಳು ಯಾವವು? ಬನ್ನಿ ನೋಡೋಣ.

೧. ಗ್ರಾಹಕರಿಗೆ ಆಟೋ/ಕ್ಯಾಬ್ ಹುಡುಕುವ ಕಷ್ಟ

ಮುಖ್ಯ ರಸ್ತೆಯಿಂದ ಮನೆ ದೂರ ಇದ್ದರೆ ಕಿಮಿಗಟ್ಟಲೆ ಲಗೇಜ್ ಎತ್ತಿಕೊಂಡು ನಡೆದುಕೊಂಡು ಬಂದು ಆಟೋ/ಕ್ಯಾಬ್ ಹುಡುಕ ಬೇಕಿತ್ತು. ಇಲ್ಲಾಂದ್ರೆ ಮನೆಯವರು ಯಾರಾದ್ರೂ ಒಬ್ಬರಾದ್ರೂ ಬಂದು ಮನೆಯವರೆಗೆ ಗಾಡಿ ಕರೆತರಬೇಕಿತ್ತು.

ಹೆಚ್ಚಿನವರು ನಾವು ಹೇಳಿದ ಜಾಗಕ್ಕೆ ಬರುತ್ತಿರಲಿಲ್ಲ.  ಕೆಲವರು ಡ್ಯೂಟಿ ಮುಗಿಸಿ ಮನೆಗೆ ಹೋಗುವವರು ಬೇರೆ ದಿಕ್ಕಿಗೆ ಬರಲ್ಲ. ಅದರಲ್ಲಿ ತಪ್ಪೇನಿಲ್ಲ. ಆದರೆ ಕೆಲವು ರಿಮೋಟ್ ಜಾಗಕ್ಕೆ ವಾಪಸ್ ಡ್ಯೂಟಿ ಸಿಗಲ್ಲ ಎಂದು ಹೆಚ್ಚಿನವರು ಬರುತ್ತಿರಲಿಲ್ಲ. ಅಥವಾ ರಿಟರ್ನ್ ಜರ್ನಿಗೂ ಡಬಲ್ ಹಣ ಸಂದಾಯ ಮಾಡ ಬೇಕಿತ್ತು.

ಇನ್ನು ಪರಿಚಿತರ ನಂಬರ್ ಇಟ್ಟು ಕೊಂಡರೂ ಅನೇಕ ಬಾರಿ ಅವರು ಬೇರೆ ಕಡೆಗೆ ಡ್ಯೂಟಿ ಹೋಗಿದ್ದರಿಂದ ಸಿಗುತ್ತಿರಲಿಲ್ಲ. ಅಥವಾ ಮುಂಗಡವಾಗಿ ಹೇಳಿದರೂ ಚಾಲಕರು ಕೂಡಾ ಅನವಶ್ಯಕವಾಗಿ ಕಾಯಬೇಕಿತ್ತು.

೨. ಬೇರೆ ಸಿಟಿಗೆ ಹೋದಾಗ ಭಾಷೆ ಬರದೇ ಕಷ್ಟ

ಹೊಸತಾಗಿ ಬೇರೆ ಸಿಟಿಗೆ ಹೋದಾಗ ಕೂಡಾ ಅಲ್ಲಿ ಭಾಷೆ ಅರಿತು ಎಲ್ಲಿಗೆ ಹೋಗಬೇಕು ಹೇಳುವದು, ಚೌಕಾಶಿ ಮಾಡುವದರಲ್ಲೇ ಸಮಯ ಕಳೆಯುತ್ತಿತ್ತು. ಜಾಸ್ತಿ ಹಣ ಕೂಡಾ ಕೊಡಬೇಕಾಗಿತ್ತು.

೩. ಅನವಶ್ಯಕ ಸಮಯ ವ್ಯರ್ಥ

ಕ್ಯಾಬ್ / ಆಟೋ ಹುಡುಕುವದರಲ್ಲೇ ಬಹುಕಾಲ ಕಳೆಯುತ್ತಿತ್ತು. ಟೈಮ್ ಈಸ್ ಮನಿ! ಅಂದ್ರೆ ಸಮಯವೇ ಹಣ. ಸಮಯ ಉಳಿತಾಯ ಆದರೆ ನಾವು ಅದೇ ಸಮಯವನ್ನು ಉಪಯುಕ್ತ ಬೇರೆ ಕೆಲಸಗಳಲ್ಲಿ ಕಳೆಯಬಹುದು.

೪. ಮೀಟರ್ ಹಾಕಲ್ಲ ಹೇಳಿದ್ದೇ ಬೆಲೆ

ಆಟೋ / ಟ್ಯಾಕ್ಸಿಗಳಿಗೆ ಮೀಟರ್ ಇದೆ ಅಲ್ವಾ. ಅನೇಕ ಬಾರಿ ಮೀಟರ್ ಹಾಕದೇ ದುಪ್ಪಟ್ಟು ಹಣ ಕೇಳುತ್ತಿದ್ದರು.

ಇದೇ ಅನುಭವ ಮೆಜೆಸ್ಟಿಕ್ ಅಲ್ಲಿ ಊರಿನಿಂದ ಬಸ್ ಅಲ್ಲಿ ಬಂದಾಗ ಬೆಳಿಗ್ಗೆ, ಆಫೀಸಿನಿಂದ ಹೋಗುವಾಗ ಕೂಡಾ ಆಗಿದೆ. ಹೇಳಿದ್ದೆ ಬೆಲೆ. ಮೀಟರ್ ಬರೀ ಡೆಕೋರೇಶನ್ ಗೆ ಮಾತ್ರ. ಕಿಮಿಗೂ ಕೇಳುವ ಬೆಲೆಗೂ ಯಾವುದೇ ಸಂಬಂಧ ಇಲ್ಲ. ಇಷ್ಟು ಕೊಟ್ಟರೆ ಬರ್ತಿನಿ ಅಷ್ಟೇ ಅನ್ನೋ ಮನೋಭಾವ.

ಮಳೆ ಬಂದಾಗ, ಐಟಿ ಕಂಪೆನಿ ಇರುವಲ್ಲಿ, ಬೆಳಂಬೆಳಿಗ್ಗೆ ಹೀಗೆ ಎಲ್ಲ ಕಡೆ ಆಟೋ ಬೆಲೆ ಕೇಳಲಾಗದು. ಯಾರೂ ನಿಗದಿಪಡಿಸಿದ ಕಿಮಿ ಲೆಕ್ಕಾಚಾರಕ್ಕೆ ಬರುವದೇ ಇಲ್ಲ.

ಓಲಾ / ಉಬರ್ ಅಂತಹ ಎಪ್ ಮುಂಚೆ ಆತುರ ಇರುವದರಿಂದ ಹೇಳಿದ ಹಣ ತೆತ್ತು ಹೋಗುವ ಅನಿವಾರ್ಯತೆ ಗ್ರಾಹಕರಿಗೆ ಇತ್ತು. ಈಗ ಪರ್ಯಾಯ ಇದೆ.

೫. ಮೀಟರ್ ಅಲ್ಲಿ ಮೋಸ

ಇನ್ನು ಮೀಟರ್ ಮೋಸದ ಬಗ್ಗೆ ನಾನು ಮಾತನಾಡದಿರುವದು ಲೇಸು. ಒಂದೇ ಜಾಗಕ್ಕೆ ಬೇರೆ ಬೇರೆ ಗಾಡಿಯಲ್ಲಿ ಬಿಲ್ ಬೇರೆ ಬರುತ್ತಿದ್ದು ಅಲ್ಲಲ್ಲಿ ಮೀಟರ್ ಜಂಪ್ ಆಗುವದು, ಬದಲಾಯಿಸಿದ ಮೀಟರ್ ನಿಂದ ನಮ್ಮಂತಹ ಗ್ರಾಹಕರಿಗೆ ಆದ ಮೋಸಕ್ಕೆ ಲೆಕ್ಕ ಇಲ್ಲ.

೬. ನೇರವಾಗಿ ಹೋಗದೇ ಸುತ್ತು ಬಳಸಿ ಹೋಗುವದು

ಅಕಸ್ಮಾತ್ ನೀವು ಹೋಗುವ ಜಾಗಕ್ಕೆ ದಾರಿ ಗೊತ್ತಿಲ್ಲದಿದ್ದರೆ ಕಥೆ ಮುಗಿಯಿತು. ಬೆಂಗಳೂರಿಗೆ ಹೊಸಬರಾದರೆ ಹೋಗುವ ಜಾಗಕ್ಕೆ ನೇರವಾಗಿ ಹೋಗುವ ಬದಲು ಸುತ್ತು ಬಳಸಿ ಹೋಗಿ ಜಾಸ್ತಿ ಮೀಟರ್  ಓಡಿಸಿ ಕೂಡಾ ಕೆಲವರು ಮೋಸ ಮಾಡುತ್ತಿದ್ದರು.

೭. ಏನನ್ನಾದ್ರು ಮರೆತರೆ ಆಟೋ/ಕ್ಯಾಬ್ ಗೊತ್ತಿಲ್ಲದಿರುವದು

ಅಪ್ಪಿ ತಪ್ಪಿ ಯಾವುದಾದ್ರೂ ವಸ್ತು ಬಿಟ್ಟು ಬಿಟ್ಟಿದೀರಾ ಆಗ ಗ್ರಾಹಕರಿಗೂ ಆಟೋ / ಕ್ಯಾಬ್ ನಂಬರ್ ಗೊತ್ತಿಲ್ಲ. ಚಾಲಕನಿಗೂ ಗ್ರಾಹಕರ ವಿವರ ಇಲ್ಲ. ಸಂಪರ್ಕ ಸ್ವಲ್ಪ ಆಗ ಕಷ್ಟ ಇತ್ತು.

೮. ಡ್ಯೂಟಿ ಬೇಕಾದ್ರೆ ಕಮಿಶನ್ ಕೊಡಬೇಕು

ನೆನಪಿಡಿ ಬರಿ ಗ್ರಾಹಕರಿಗೆ ಅಷ್ಟೇ ಅಲ್ಲ ಚಾಲಕರಿಗೂ ಸಮಸ್ಯೆ ಇತ್ತು. ಡ್ಯೂಟಿ ಬೇಕಿದ್ದರೆ ಟ್ರಾವೆಲ್ ಏಜೆಂಟ್ ಹೇಳಿದ ಕಮಿಶನ್ ಕೊಡಬೇಕಿತ್ತು. ಇಲ್ಲಾಂದ್ರೆ ಯಾವುದಾದ್ರೂ ಕ್ಯಾಬ್ ಕಂಪೆನಿಗಳಿಗೆ ಅವರು ನೀಡುವ ಸಂಬಳಕ್ಕೆ ದುಡಿಯಬೇಕಿತ್ತು. ತನ್ನದೇ ಆದ ಬ್ಯುಸಿನೆಸ್ ನಡೆಸುವ ಸ್ವಾತಂತ್ರ್ಯ ತುಂಬಾ ಇರಲಿಲ್ಲ.

೯. ಗ್ರಾಹಕರನ್ನು ಹುಡುಕುವ ಕಷ್ಟ

ಪಕ್ಕದ ರೋಡಲ್ಲೇ ಗ್ರಾಹಕ ಇದ್ದರೂ ಎಲ್ಲ ಕಡೆ ಖಾಲಿ ಆಟೋ/ಕ್ಯಾಬ್ ಅಲ್ಲಿ ತಿರುಗಾಡುತ್ತಾ ಗ್ರಾಹಕರಿಗಾಗಿ ಅಲೆದಾಡ ಬೇಕಿತ್ತು. ಒಂದೇ ಬಸ್ ಸ್ಟ್ಯಾಂಡ್ ಹತ್ರ ಹೋಗಿ ಆಟೋ ಬೇಕಾ ಎಂದು ಕೇಳಬೇಕಿತ್ತು. ಇಲ್ಲಾ ಕ್ಯಾಬ್ / ಟ್ರಾವೆಲ್ ಕಂಪೆನಿಗಳು ಡ್ಯೂಟಿ ಕೊಡುವವರೆಗೂ ಚಾತಕ ಪಕ್ಷಿಯಂತೆ ಕಾಯಬೇಕಿತ್ತು.

೧೦. ದಾರಿ ಹುಡುಕುವ ಕಷ್ಟ

ಗ್ರಾಹಕರಿಗೆ ಎಲ್ಲಿ ಹೋಗಬೇಕೋ ಆ ದಾರಿ ಹುಡುಕುವದು ಹೊಸ ಚಾಲಕರಿಗೆ ತುಂಬಾ ಕಷ್ಟದ ಕೆಲಸ ಆಗಿತ್ತು. ದಾರಿಯಲ್ಲಿ ನಿಲ್ಲಿಸುತ್ತಾ ಕೇಳುತ್ತಾ ಹೋಗ ಬೇಕಿತ್ತು. ಕೆಲವೊಮ್ಮೆ ಆ ಜಾಗದ ಹತ್ತಿರ ಹೋದರೂ ಗ್ರಾಹಕರ ಮನೆ / ಅಂಗಡಿ / ಜಾಗ ಹುಡುಕುವ ಸಮಸ್ಯೆ ಇತ್ತು. ಅಲ್ಲಿ ಅಲೆದಾಡುತ್ತಾ ಸಮಯವೂ ವ್ಯರ್ಥ ಆಗುತ್ತಿತ್ತು.

೧೧. ಚಿಲ್ಲರೆ ಸಮಸ್ಯೆ

ಗ್ರಾಹಕರ ಬಳಿ ಚಿಲ್ಲರೆ ಇರುತ್ತಿರಲಿಲ್ಲ. ದೊಡ್ಡ ನೋಟು ಕೊಟ್ಟಾಗ ಚಾಲಕರು ಅಂಗಡಿ ಅಂಗಡಿ ಅಲೆಯುತ್ತಾ ಅದಕ್ಕೆ ಚೇಂಜ್ ಪಡೆದು ಚಿಲ್ಲರೆ ವಾಪಸ್ ನೀಡಲು ಹರ ಸಾಹಸ ಮಾಡಬೇಕಿತ್ತು. ಸಮಯವೂ ವ್ಯರ್ಥ, ಕೆಲವೊಮ್ಮೆ ಚಾಲಕರು ಕಡಿಮೆ ಹಣ ಪಡೆಯುವದೋ ಅಥವಾ ಗ್ರಾಹಕರು ಕಡಿಮೆ ಚೇಂಜ್ ಪಡೆಯುವದು ಆಗುತ್ತಿತ್ತು.

೧೨. ಗ್ರಾಹಕರ ಬಳಿ ಹಣ ಇರದ ಸಮಸ್ಯೆ

ಎಷ್ಟೋ ಬಾರಿ ಗ್ರಾಹಕರಿಗೆ ಕೈಯಲ್ಲಿ ಹಣ ಇಲ್ಲದೇ ಎಟಿಎಂ ಹುಡುಕುತ್ತಾ ಓಡಾಡುವ ಸಮಸ್ಯೆ. ಇರುವ ಹಣಕ್ಕಿಂತ ಮೀಟರ್ ಜಾಸ್ತಿ ಆಗಿ ಕೊನೆಯ ಕ್ಷಣಕ್ಕೆ ಏಟಿಎಂ ಹುಡುಕುವ ಗಡಿಬಿಡಿ.

೧೩. ಸುರಕ್ಷತೆಯ ಸಮಸ್ಯೆ

ನಡು ರಾತ್ರಿಯಲ್ಲಿ ಒಂಟಿಯಾಗಿ ಹೋಗುವಾಗ ಸ್ವಲ್ಪ ಭಯ ಅಳುಕು ಇದ್ದೇ ಇರುತಿತ್ತು.

೧೪. ನಡುರಸ್ತೆಯಲ್ಲಿ ವಾಹನ ಹಾಳಾದಾಗ / ಪೆಟ್ರೋಲ್ ಖಾಲಿ ಆದಾಗ

ನಡುರಸ್ತೆಯಲ್ಲಿ ಹೋಗುವಾಗ ವಾಹನ ಹಾಳಾದಾಗ ಅಥವಾ ಇಂಧನ ಖಾಲಿ ಆದಾಗ ಚಾಲಕರಿಗೆ ತಮ್ಮ ವಾಹನ ಗ್ಯಾರೇಜಿಗೆ ಒಯ್ಯುವ  ಅಥವಾ ಇಂಧನ ತರುವ ಅನಿವಾರ್ಯತೆ.
ಆದರೆ ಎಲ್ಲೋ ಹೋಗುವ ಅವಸರದಲ್ಲಿದ್ದ ಗ್ರಾಹಕರಿಗೆ ಹೊಸ ಗಾಡಿ ಬಾಡಿಗೆಗೆ ಮಧ್ಯ ದಾರಿಯಲ್ಲಿ ಲಗ್ಗೇಜ್ ಜೊತೆಗೆ ಹುಡುಕುವ ಸಂಕಟ. ಅದೂ ಆ ವಾಹನ ಅದೇ ದಾರಿಯಲ್ಲಿ ಬರಬೇಕು! ಖಾಲಿ ಇರಬೇಕು! ಕಷ್ಟ!! ಕಷ್ಟ!!

ಗ್ರಾಹಕರಿಗೆ / ಚಾಲಕರಿಗೆ ಓಲಾ / ಉಬರ್ ನಿಂದ ಏನು ಲಾಭ?


ಈ ಓಲಾ / ಉಬರ್ ನಿಂದ ನಮ್ಮಂತಹ ಗ್ರಾಹಕರಿಗೆ ಹಾಗೂ ಚಾಲಕರಿಗೆ ಕೂಡಾ ಏನು ಲಾಭ ನೋಡೋಣ.

೧. ನಾವಿರುವ ಜಾಗಕ್ಕೇ / ಮನೆಗೇ ಬರುವ ಗಾಡಿ

ಇಂದು ಓಲಾ / ಉಬರ್ / ರೆಪಿಡೋ ಮೊದಲಾದ ಆಪ್ ಮುಖಾಂತರ ನಮ್ಮ ಮನೆಗೆ ಕ್ಯಾಬ್ / ಆಟೋ / ಬೈಕ್ ಟ್ಯಾಕ್ಸಿ ಬುಕ್ ಮಾಡಬಹುದು. ತುಂಬಾ ಜಾಸ್ತಿ ಡಿಮ್ಯಾಂಡ್ ಇದ್ದಾಗ ಸಮಸ್ಯೆ ಇರುತ್ತೆ ಆದರೆ ಸಮಸ್ಯೆಗಳು ಎಲ್ಲಿಲ್ಲ ಹೇಳಿ.

ಅಷ್ಟೇ ಅಲ್ಲ ಮುಂಚೆ ನಾನು ಕ್ಯಾಬ್ ಬಳಸುತ್ತಿದ್ದುದು ಕೇವಲ ದೂರದ ಪ್ರಯಾಣಕ್ಕೆ ಮಾತ್ರ. ಯಾಕೆಂದರೆ ಮೇರು ಕ್ಯಾಬ್ ನಂತಹ ಕಂಪೆನಿಗಳಿಗೆ ಫೋನ್ ಮಾಡಿ ಏರ್ ಪೋರ್ಟ್ ಇತ್ಯಾದಿ ಹೋಗುವದಕ್ಕೆ ೨ ದಿನ ಮೊದಲೆ ಕಾದಿರಿಸ ಬೇಕಾಗಿತ್ತು. ಆಗ ಓಲಾ ಶೇರ್ ಇತ್ಯಾದಿ ಆಯ್ಕೆ ಇರಲಿಲ್ಲ. ಅಷ್ಟೇ ಅಲ್ಲ ಕ್ಯಾಬ್ ಡ್ರೈವರ್ ಟ್ರಿಪ್ ಮುಗಿದ ಮೇಲೆ ಗ್ರಾಹಕ ಕಾದಿರಿಸಿದ ಬುಕಿಂಗ್ ಸೆಂಟರ್ ಗೆ ನಿಗದಿತ ಕಮಿಶನ್ ಹಣ ಕೊಡಬೇಕಿತ್ತು.

ಓಲಾ ಉಬರ್ ಬಂದ ಮೇಲೆ ನಡುರಸ್ತೆಯಲ್ಲೂ ಕ್ಯಾಬ್ ಅಥವಾ ಆಟೋ ಅಥವಾ ಬೈಕ್ ಟ್ಯಾಕ್ಸಿ ಎಲ್ಲಿದೆ ಎಂಬುದು ಹುಡುಕುವದು ಸುಲಭವಾಗಿದೆ. ಹಲವಾರು ಆಟೋಗಳಿಗೆ ಬರ್ತೀರಾ ಬರ್ತೀರಾ ಎಂದು ಕೇಳಬೇಕಿಲ್ಲ.

ಚಾಲಕರಿಗೂ ಊರೆಲ್ಲಾ ಓಡಾಡುತ್ತಾ ಕೇಳುತ್ತಾ ತಿರುಗಾಡಬೇಕಿಲ್ಲ. ಬದಲಾಗಿ ಯಾವ ಕಡೆ ಡಿಮ್ಯಾಂಡ್ ಇದೆಯೊ ಹತ್ತಿರ ಇದ್ದರೆ ಸಾಕು ಡ್ಯೂಟಿ ಇದ್ದಲ್ಲೇ ಬರುತ್ತೆ. ಗ್ರಾಹಕ ಇರುವ ಜಾಗಕ್ಕೆ ನಿಖರವಾಗಿ ತಲುಪಬಹುದು.

೨. ಸಮಯ ಉಳಿತಾಯ

ಓಲಾ / ಉಬರ್ ಎಪ್ ಗಳು ಹತ್ತಿರದಲ್ಲಿರುವ ಎಲ್ಲ ಆಟೋ ನೋಡಿ ನಮಗೆ ಮ್ಯಾಚ್ ಆಗುವ ಆಟೋಗಳಿಗೆ ಡ್ಯೂಟಿ ಕಳುಹಿಸುವದರಿಂದ ತತಕ್ಷಣ ಕ್ಯಾಬ್ / ಆಟೋ ಚಾಲಕರಿಗೆ ತಿಳಿದು ಇಬ್ಬರಿಗೂ ಅನುಕೂಲ. ಭಾಷೆಯ ಸಮಸ್ಯೆ ಇಲ್ಲ. ಎಪ್ ಅಲ್ಲಿ ನಾವು ಎಲ್ಲಿಂದ ಎಲ್ಲಿಗೆ ಹೋಗಬೇಕು ಅನ್ನುವದನ್ನು ಹೇಳಿದ್ದು ಸುಮಾರು ಎಷ್ಟು ಹಣ ಎಂಬುದು ಕೂಡಾ ನಮಗೆ ಮೊದಲೇ ಗೊತ್ತಿರುತ್ತದೆ.

ಮೂರು ಪಟ್ಟು ಹಣ ಕೇಳಿರುವ ಚಾಲಕನ ಜೊತೆ ಚೌಕಾಶಿ ಮಾಡುತ್ತಾ ಕಾಲಹರಣ ಮಾಡುವ ಸಮಸ್ಯೆ ಇಲ್ಲ.

೩. ಮೀಟರ್ ಇದ್ದೇ ಇರುತ್ತೆ ಅಲ್ಲಿ ಮೋಸ ಇಲ್ಲ

ಅವೆಲ್ಲ ಓಲಾ / ಉಬರ್ ಅಲ್ಲಿ ಇಲ್ಲವೇ ಇಲ್ಲ. ಜಿಪಿಎಸ್ ಮೂಲಕ ಕರಾರುವಕ್ಕಾಗಿ ದೂರ ಲೆಕ್ಕ ಹಾಕಿ ಬಿಲ್ ನೀಡುತ್ತವೆ. ತಾಂತ್ರಿಕ ಸಮಸ್ಯೆಯಿಂದ ಬಿಲ್ಲಿಂಗ್ ತಪ್ಪಾಗುವ ಸಾಧ್ಯತೆ ಇದೆ. ಆದರೆ ಕಂಪನಿಗಳಿಗೆ ದೂರು ನೀಡಿದರೆ ಸರಿಪಡಿಸುತ್ತವೆ. ವಾಹನದಲ್ಲಿ ಮೀಟರ್ ಇರುವದಿಲ್ಲ ಜಿಪಿಎಸ್ ಆಧಾರಿತ. ಟ್ಯಾಂಪರ್ ಮಾಡಲು ಸಾಧ್ಯವಿಲ್ಲ.

೪. ಸರಿಯಾದ ದಾರಿ

ಜಿಪಿಎಸ್ ಸರಿಯಾದ ದಾರಿ ತೋರಿಸುವದರಿಂದ ಚಾಲಕರಿಗೂ ಮಾರ್ಗ ಹುಡುಕುವ ಸಮಸ್ಯೆ ಇಲ್ಲ, ಸುತ್ತಿ ಬಳಸಿ ಹೋದರೆ ಓಲಾ / ಉಬರ್ ಪತ್ತೆ ಹಚ್ಚಿ ಬಿಡುತ್ತಾರೆ.

೫. ಗ್ರಾಹಕ / ಚಾಲಕ ಸಂಪರ್ಕ

ಗ್ರಾಹಕ ಏನಾದರೂ ಮರೆತಿದ್ದರೆ ಮತ್ತೆ ಚಾಲಕನಿಗೆ ಸಂಪರ್ಕ ಮಾಡಬಹುದು.

೬. ಮಧ್ಯವರ್ತಿಗಳ ಸಮಸ್ಯೆ ಇಲ್ಲ

ಗ್ರಾಹಕ / ಚಾಲಕರ ಮಧ್ಯೆ ಕಮಿಶನ್ ಪಡೆಯುವ ಮಧ್ಯವರ್ತಿಗಳಿಲ್ಲ. ಓಲಾ / ಉಬರ್ ತಂತ್ರಜ್ಞಾನಕ್ಕೆ ಸೇವೆಗೆ ಹಣ ನೀಡಬೇಕು ನಿಜ. ಆದರೆ ಅದಕ್ಕೆ ಹೆಚ್ಚಿನ ಸೌಲಭ್ಯ ಸಿಗುತ್ತೆ. ಇದು ಒಂತರಾ ಗ್ರಾಹಕರಿಗೂ ಚಾಲಕರಿಗೂ ವಿನ್ ವಿನ್ ಸಂದರ್ಭ. ಇದಕ್ಕೂ ಮೊದಲು ಟ್ರಾವೆಲ್ ಬುಕಿಂಗ್ ಸೆಂಟರ್ ಗೆ, ಕ್ಯಾಬ್ ಕಂಪನಿಗಳಿಗೆ ಇದರ ಹಲವು ಪಟ್ಟು ಕಮಿಶನ್ ನೀಡಬೇಕಿತ್ತು.

೭. ಚಿಲ್ಲರೆ / ಹಣ ಇರದಿರುವ ಸಮಸ್ಯೆ ಕಡಿಮೆ

ಆನ್ ಲೈನ್ ಹಣ ಸಂದಾಯ, ಆಮೇಲೆ ಹಣ ನೀಡುವ ಸೌಲಭ್ಯ ಚಿಲ್ಲರೆ ಸಮಸ್ಯೆ, ಹಣ ಇಲ್ಲದಾಗ ಎಟಿಎಂ ಹುಡುಕುವ ಸಮಸ್ಯೆ ಕಡಿಮೆ ಮಾಡುತ್ತೆ.

೮. ಸುರಕ್ಷತೆಯ ಸಮಸ್ಯೆ ಕಡಿಮೆ

ಓಲಾ / ಉಬರ್ ನಂತಹ ಕಂಪನಿಗಳಿಗೆ ಚಾಲಕರನ್ನು ಹಿನ್ನೆಲೆ ಪರೀಕ್ಷೆ ಮಾಡಿ ನೊಂದಾಯಿಸುವ ಅವಕಾಶ ಇದೆ. ಚಾಲಕ ಅಥವಾ ಗ್ರಾಹಕ ಕೆಟ್ಟ ವರ್ತನೆ ಮಾಡಿದ ದೂರು ಬಂದಲ್ಲಿ ಅದನ್ನು ಪರಿಶೀಲಿಸಿ ಕಿತ್ತು ಹಾಕುವ ಆಯ್ಕೆ ಇದೆ. ಯಾರು ಯಾರನ್ನು ಎಲ್ಲಿಗೆ ಒಯ್ದರು ಎಂಬ ಮಾಹಿತಿ ಕಂಪನಿಗಳಿಗೆ ಇರುವದರಿಂದ ನಾಳೆ ತನಿಖೆ ಮಾಡಲು ಸಹಾಯಕ.

೯. ಚಾಲಕರಿಗೆ ಜಾಸ್ತಿ ಡ್ಯೂಟಿ

ಒಲಾ / ಉಬರ್ ಆಟೋ / ಕ್ಯಾಬ್ ಹುಡುಕುವದು ಸುಲಭ ಆದ್ದರಿಂದ ಗ್ರಾಹಕರು ಹೆಚ್ಚು ಹೆಚ್ಚು ಬಳಸುತ್ತಾರೆ. ಇದರಿಂದ ಚಾಲಕರಿಗೂ ಕೂಡಾ ಮುಂಚೆಗಿಂತ ಜಾಸ್ತಿ ಕೆಲಸ ಸಿಗುತ್ತೆ. ಅಲ್ಲಿ ಗ್ರಾಹಕರಿಗೆ ಟಿಪ್ಸ್ ಕೊಡುವ ಅನುಕೂಲ ಕೂಡಾ ಇದೆ. ಹಣವಂತರು, ದಾರಾಳಿಗಳು ಕ್ಯಾಬ್ / ಆಟೋ ಸೇವೆ ಇಷ್ಟ ಆದಲ್ಲಿ ಅದನ್ನು ಕೊಡುತ್ತಾರೆ.

ಆರಂಭಿಕ ದಿನಗಳಲ್ಲಿ ಓಲಾ / ಉಬರ್ ನಡುವೆ ಮಾರುಕಟ್ಟೆಗೆ ಸಮರ

ಆರಂಭಿಕ ದಿನಗಳಲ್ಲಿ ಓಲಾ / ಉಬರ್ ಬಂಡವಾಳ ಹೂಡಿ ಕ್ಯಾಬ್ / ಆಟೋ ಚಾಲಕರಿಗೆ ಇನ್ಸೆಂಟಿವ್ / ಸಾಲಕ್ಕೆ ಹೊಸ ಕ್ಯಾಬ್ ಇತ್ಯಾದಿ ನೀಡುತ್ತಿದ್ದವು. ಹಾಗೆಯೆ ಗ್ರಾಹಕರಿಗೂ ಕೂಡಾ ಭಾರಿ ಡಿಸ್ಕೌಂಟ್, ಕ್ಯಾಶ್ ಬ್ಯಾಕ್  ಇತ್ಯಾದಿ ಲಭ್ಯವಿದ್ದವು. ಇವೆಲ್ಲ ಮಾರುಕಟ್ಟೆ ಶೇರ್ ಜಾಸ್ತಿ ಮಾಡಿಕೊಳ್ಳುವ ತಂತ್ರ ಮಾತ್ರ. ಇವೆಲ್ಲ ಯಾವಾಗಲೂ ಇರುತ್ತೆ ಎಂದು ನಂಬಿದ್ದರೆ ಅದು ನಮ್ಮ ಭ್ರಮೆ ಮಾತ್ರ.

ಎಲ್ಲಾ ಕಂಪೆನಿಗಳು ಆರಂಭಿಕ ವರ್ಷಗಳಲ್ಲಿ ಜನರಿಗೆ ಕಡಿಮೆ ಹಣದಲ್ಲಿ ನೀಡಿ ತಮ್ಮ ಸೇವೆಯ ಪರಿಚಯ ಮಾಡಿ ಅದು ಯಾಕೆ ಬೇಕು ಅನ್ನುವದನ್ನು ಮನಗಾಣಿಸಿ ಅದರ ಮೇಲೆ ಅವಲಂಭಿಸುವ ಹಾಗೆ ಮಾಡುತ್ತಾರೆ. ಆಮೇಲೆ ನಿಧಾನವಾಗಿ ತಮ್ಮ ಸೇವೆಗೆ ಚಾರ್ಜ್ ಮಾಡಲು ಆರಂಭಿಸುತ್ತಾರೆ. 

ಆಗ ಕೆಲವರು ಸೇವೆಯನ್ನು ಬಳಸುವದನ್ನು ನಿಲ್ಲಿಸಿದರೂ ಆ ಸೇವೆ ಯಾರಿಗೆ ಅನುಕೂಲವೋ ಅವರು ಬಳಸುವದನ್ನು ಮುಂದುವರಿಸುತ್ತಾರೆ ಎಂಬುದು ಈ ಕಂಪನಿಗಳಿಗೆ ಗೊತ್ತು. 

ಇದು ನಮ್ಮಲ್ಲಿ ಮೊದಲು ೧ರೂ ಗೆ ಪೇಪರ್ ಕೊಟ್ಟು ಆಮೇಲೆ ನಾರ್ಮಲ್ ಬೆಲೆ ಕೇಳುವದಿಲ್ಲವೇ. ಅದೇ ರೀತಿ ಇದು ವ್ಯಾಪಾರಿ ತಂತ್ರ.

ಈಗ ಅವರ ಬೆಲೆ ಸಮರ ಮುಗಿದಿದೆ.

ಓಲಾ / ಉಬರ್ ಕಂಪನಿಗಳಿಗೆ ಖರ್ಚು ಏನಿರುತ್ತೆ?


ನೆನಪಿಡಿ ಓಲಾ / ಉಬರ್ ಸೌಲಭ್ಯ ಸುಖಾಸುಮ್ಮನೆ ಗಾಳಿಯಲ್ಲಿ ಸೃಷ್ಟಿ ಆಗಿಲ್ಲ. ಈ ಕಂಪನಿಗಳು ಸಾಫ್ಟವೇರ್ ನಿರ್ಮಾಣ, ನಿರ್ವಹಣೆ, ಸರ್ವರ್ ನಿರ್ವಹಣೆ, ಗೂಗಲ್ ಮ್ಯಾಪ್ ಲೈಸೆನ್ಸ್, ಕಾಲ್ ಸೆಂಟರ್, ಡ್ರೈವರ್ ರಿಜಿಸ್ಟ್ರೇಶನ್, ಸ್ಮಾರ್ಟ್ ಡಿವೈಸ್ ನೀಡುವಿಕೆ ಹೀಗೆ ಹಲವು ಕಾರ್ಯಗಳಿಗೆ ಹಣ ವ್ಯಯಿಸಿ ನಡೆಸುತ್ತಿವೆ.

ಸಾಫ್ಟವೇರ್ ಇಂಜಿನಿಯರ್ ಗಳು, ಮ್ಯಾನೇಜರ್, ಕಾಲ್ ಸೆಂಟರ್ ಹೀಗೆ ಹಲವು ರೀತಿಯ ಉದ್ಯೋಗಿಗಳು ಸಹ ಇದಕ್ಕೆ ಕೆಲಸ ಮಾಡುತ್ತಾರೆ.

ಇನ್ನು ಪ್ರಯಾಣ ವಿಮೆ / ಹಣ ಪಾವತಿ / ಆಮೇಲೆ ಹಣ ನೀಡುವ ಸೌಲಭ್ಯ ಕೂಡಾ ನೀಡುತ್ತಿವೆ.

ಇವ್ಯಾವುದೂ ಉಚಿತವಾಗಿ ಗ್ರಾಹಕರಿಗೆ / ಚಾಲಕರಿಗೆ ಸಿಗದು ಅದರ ಬೆಲೆ ಯಾರಾದರೂ ತೆರಲೇ ಬೇಕು. 

ಇದಕ್ಕೂ ಮೊದಲು ಮಧ್ಯವರ್ತಿಗಳಿಗೆ ಇಬ್ಬರೂ ಸೇರಿ ಇದಕ್ಕಿಂತ ಜಾಸ್ತಿ ಕಮಿಶನ್ ನೀಡಬೇಕಿತ್ತು. ನಮಗೆ ಮತ್ತೆ ಅದೇ ವ್ಯವಸ್ಥೆ ಬೇಕೇ?

ಇನ್ನು ಯಾರಾದರೂ ಪ್ರತ್ಯೇಕ ಆಪ್ ಇದಕ್ಕೂ ಕಡಿಮೆ ಬೆಲೆಗೆ ನಡೆಸುತ್ತೇನೆ ಎಂದರೆ ಅದಕ್ಕೆ ಮಾರುಕಟ್ಟೆ ಇದೆ. ಅವರಿಗೆ ನನ್ನ ಸಲಹೆ ಏನೆಂದರೆ ದಯವಿಟ್ಟು ನಿಮ್ಮ ಹೊಸ ಎಪ್ / ಸೇವೆ ಹೊರತನ್ನಿ. ಯಾವುದು ಬಳಸಬೇಕು ಅನ್ನುವದನ್ನು ಗ್ರಾಹಕರಿಗೆ ಬಿಟ್ಟು ಬಿಡಿ. ಅಲ್ವಾ?

ಓಲಾ / ಉಬರ್ ಸೇವೆಗೆ ನಾರ್ಮಲ್ ಕ್ಯಾಬ್ ಆಟೋ ಗಿಂತ ಬೆಲೆ ಜಾಸ್ತಿ ಯಾಕೆ?

ರಸ್ತೆಯಲ್ಲಿ ನೇರವಾಗಿ ಸಿಗುವ ಆಟೋ ಗೆ ಯಾವುದೇ ತಂತ್ರಜ್ಞಾನ ಬೇಕಿಲ್ಲ. ಆಟೋ ಹಾಗೂ ಗ್ಯಾಸ್ ಖರ್ಚು ಮಾತ್ರ. ಆದರೆ ಓಲಾ / ಉಬರ್ ವ್ಯವಸ್ಥೆಯಲ್ಲಿ ಗ್ರಾಹಕ, ಚಾಲಕ ಹಾಗೂ ಕಂಪನಿ ಮೂರೂ ಜನರಿಗೂ ಖರ್ಚಿದೆ. ಓಲಾ / ಉಬರ್ ಅಂತಹ ಕಂಪನಿ ಹುಟ್ಟು ಹಾಕಲು ಭಾರಿ ಮಟ್ಟದ ಆರಂಭಿಕ ಬಂಡವಾಳ ಅಷ್ಟೇ ಅಲ್ಲ ನಡೆಸಲು ಕೂಡಾ ಹಣ ಬೇಕು.

ಇಕಾನಾಮಿ ಆಫ್ ಸ್ಕೇಲ್ ಮೂಲಕ ಗ್ರಾಹಕರಿಗೆ ಕಡಿಮೆ ದರದಲ್ಲಿ ಸೇವೆ ಒದಗಿಸಲು ಓಲಾ/ಉಬರ್ ಗಳು ಆರಂಭಿಕವಾಗಿ ಗ್ರಾಹಕರಿಗೆ / ಚಾಲಕರಿಗೆ ಆಕರ್ಷಿಸಲು ಉಚಿತ ಕೊಡುಗೆ ಮೂಲಕ ನಷ್ಟದಲ್ಲಿ ನಡೆಸಿದರು. ಆದರೆ ಕಾಲ ಕ್ರಮೇಣ ಎಲ್ಲ ಖರ್ಚುಗಳು ಗ್ರಾಹಕ / ಚಾಲಕರ ಮೇಲೇ ಬೀಳಲಿದೆ. ಕೋಟ್ಯಂತರ ಜನ ಪ್ರತಿದಿನ ಬಳಸುವದರಿಂದ ಯಾರಿಗೂ ಹೊರೆ ಎನಿಸದು.

ನೆನಪಿಡಿ ಇಲ್ಲಿಯವರೆಗೆ ಓಲಾ / ಉಬರ್ ಕಂಪನಿಗೆಳು ಗ್ರಾಹಕರನ್ನು ಚಾಲಕರನ್ನು ಸೆಳೆಯಲು ಬೇರೆ ಕಡೆಯಿಂದ ಬಂಡವಾಳ ತಂದು ನಷ್ಟದಲ್ಲಿ ನಡೆಸುತ್ತಿದ್ದರು. ಈಗ ಆ ಹನಿಮೂನ್ ಕಾಲ ಮುಗಿದಿದೆ.

ಇನ್ನು ಓಲಾ / ಉಬರ್ ಚಾಲಕರಿಗೂ ಕೂಡಾ ಎಕ್ಸ್ಟ್ರಾ ಖರ್ಚು ಇರುತ್ತೆ. ಮೊಬೈಲ್ / ಟ್ಯಾಬ್ಲೆಟ್ ಡಿವೈಸ್, ಇಂಟರ್ನೆಟ್, ಓಲಾ / ಉಬರ್ ಸೇವಾ ಶುಲ್ಕ ಹೀಗೆ ಒಂದು ರೀತಿಯ ಹೊಸ ಖರ್ಚು ಇದ್ದರೆ ಗ್ರಾಹಕರ ಇದ್ದಲ್ಲೇ ಹೋಗಲು ಎಕ್ಸ್ಟ್ರಾ ಗ್ಯಾಸ್ ಖರ್ಚಾಗುತ್ತದೆ.

ಅಂದರೆ ಆ ಸೇವೆಯನ್ನು ಪಡೆಯಲು ಗ್ರಾಹಕ / ಚಾಲಕ ಬಾಡಿಗೆ ಮೇಲೆ ಅವರ ಸೇವೆಯ ಬೆಲೆ ಎಕ್ಸ್ಟ್ರಾ ನೀಡಲೇ ಬೇಕು ಆಗಲೇ ಈ ಸೇವೆ ಗ್ರಾಹಕರಿಗೆ / ಚಾಲಕ ನಿರಂತರ ದೊರಕಿ ನಾನು ಈ ಲೇಖನದಲ್ಲಿ ಮೇಲೆ ಹೇಳಿದ ಹಲವು ಸಮಸ್ಯೆಗಳಿಂದ ಗ್ರಾಹಕ ಹಾಗೂ ಚಾಲಕ ಇಬ್ಬರೂ ದೂರ ಆಗಬಹುದು.

ಈ ಸೇವೆಯ ಭಾರ ಬರಿ ಚಾಲಕ ಹೊತ್ತರೆ ಅವರಿಗೆ ಅನ್ಯಾಯ, ಹಾಗೆಯೆ ಗ್ರಾಹಕ ಹೊತ್ತರೂ ಅದೂ ಸರಿಯಲ್ಲ. ಇಬ್ಬರೂ ಹಂಚಿದರೆ ಅನುಕೂಲ. ಇಲ್ಲಾಂದ್ರೆ ಬರಿ ಗ್ರಾಹಕರು ಕ್ಯಾಬ್ / ಆಟೋ ಮೀಟರ್ ದರದ ಮೇಲೆ ಎಕ್ಸೆಸ್ ಫೀ ನೀಡಿ ಬಳಸುವಂತೆ ಮಾಡಬಹುದು. ಆಗ ಅಗತ್ಯ ಇರುವವರು ಮನೆಗೇ, ತಾನು ಇದ್ದಲ್ಲೇ ಗಾಡಿ ಬರಬೇಕು ಎಂದು ಬಯಸುವವರು ಬಳಸುತ್ತಾರೆ. ಬೇಡ ಅನ್ನುವವರಿಗೆ ಹೊರಗಡೆ ರಸ್ತೆಯಲ್ಲಿ ಸಾಮಾನ್ಯ ಕ್ಯಾಬ್ /ಆಟೋ ಮೀಟರ್ ಆಧಾರಿತ ಸೇವೆ ಸಿಕ್ಕೇ ಸಿಗುತ್ತೆ.

ಇನ್ನು ಸರಕಾರ ಅಥವಾ ಚ್ಯಾರಿಟಿ ಸಂಸ್ಥೆಗಳು ಹಣ ಹಾಕಿ ಇಂತಹ ಸೇವೆ ಉಚಿತವಾಗಿ ತರುತ್ತೇನೆ ಅಂದರೆ ಅದೂ ಕೂಡಾ ಅನುಕೂಲ. ಹಾಗಂತ ಇತರ ಆಯ್ಕೆಗಳನ್ನು ಗ್ರಾಹಕರಿಗೆ ಸಿಗದಂತೆ ತಡೆಯುವದು ಉಚಿತವಲ್ಲ. 

ನೆನಪಿಡಿ ಈ ಉಚಿತ ಅನ್ನುವದು ಬರೀ ಭ್ರಮೆ ಮಾತ್ರ. ಸರಕಾರ ನಡೆಸಿದರೂ ಅದಕ್ಕೆ ಟ್ಯಾಕ್ಸ್ ಹಣ ನಾವೇ ಕೊಡಬೇಕು. ನಾವು ತೆಗೆದು ಕೊಳ್ಳುವ ಇತರ ವಸ್ತುಗಳು, ನಮ್ಮ ಗಳಿಕೆಯ ಮೇಲೆ ಟ್ಯಾಕ್ಸ್ ಜಾಸ್ತಿ ಹಾಕಿ ನಮ್ಮ ಬಳಿಯೇ ವಸೂಲಿ ಮಾಡುತ್ತಾರೆ ಅಷ್ಟೇ! ಬೃಷ್ಟಾಚಾರದ ಕಾರಣ ಆ ವ್ಯವಸ್ಥೆ ಇಷ್ಟು ಚೆನ್ನಾಗಿರುವ ಸಾಧ್ಯತೆ ತೀರಾ ಕಡಿಮೆ.

ಯಾಕೆ ಗೊತ್ತಾ? ಆಗ ಚಾಲಕರಿಗೂ ಹೊಸ ಉಚಿತ ಸ್ಮಾರ್ಟ್ ಫೋನ್ ನಾಲ್ಕೈದು ವರ್ಷಕ್ಕೊಮ್ಮೆ, ಅದರ ರಿಪೇರಿ ಖರ್ಚು, ತಿಂಗಳ ಇಂಟರ್ನೆಟ್ ಖರ್ಚು ಕೂಡಾ ಸರಕಾರ ಕೊಡಬೇಕಾಗುತ್ತದೆ! ನಾವು ಬಿಟ್ಟರೆ  ಗ್ರಾಹಕರಿಗೂ ಉಚಿತ ಫೋನ್ / ಇಂಟರ್ನೆಟ್ ಸರಕಾರ ಕೊಡಲಿ ಎನ್ನಬಹುದು! 

ಈ ನಾಡಿನ ಜನ ಶ್ರಮಪಟ್ಟು ಗಳಿಸಿದ ಆದಾಯದಲ್ಲಿ ನೀಡಿದ ಟ್ಯಾಕ್ಸ್ ಹಣ ಸಾರ್ವಜನಿಕ ಸಾರಿಗೆ ಆದ ಬಸ್, ಟ್ರೇನ್ ಇನ್ನಷ್ಟು ಉತ್ತಮ ಗೊಳಿಸಲು ಬಳಕೆ ಆಗಲಿ. ಈ ಉಚಿತದ ಹೆಸರಲ್ಲಿ ಬೇರೆ ಕಡೆ ಸೋರಿಕೆ ಆಗುವದು ಬೇಡ ಅಲ್ವಾ?

ಒಂದು ವ್ಯವಸ್ಥೆಯ ಹಿಂದಿರುವ ಸಂಕೀರ್ಣತೆ ಅರಿಯದೆ ಯಾವುದೇ ತಂತ್ರಜ್ಞಾನ ಇಲ್ಲದೇ ನಾವೇ ಹುಡುಕಿ ಹೋಗುವ ಕ್ಯಾಬ್/ಆಟೋ ಹಾಗೂ ಒಲಾ/ಉಬರ್ ಕ್ಯಾಬ್/ಆಟೋ ಅನ್ನು ಒಂದೇ ತಕ್ಕಡಿಯಲ್ಲಿ ಇಟ್ಟು ತೂಗಿದರೆ ಆಗುವದು ಗೊಂದಲ ಮಾತ್ರ.

ಇನ್ನು ಆ ಸೇವೆಯ ಬೆಲೆ ಎಷ್ಟಿರಬೇಕು ಎಂಬುದು ಬೇಡಿಕೆಯ ಆಧಾರದಲ್ಲಿದ್ದರೇ ಸೂಕ್ತ. ಸರಕಾರ ಒಂದು ಖಾಸಗಿ ವ್ಯವಸ್ಥೆಯ ಖರ್ಚು ವೆಚ್ಚ ನೋಡದೇ ಹಣ ನಿಗದಿ ಮಾಡಿದರೆ ನಡೆಸಲಾಗದೇ ಸೇವೆಯೇ ನಿಲ್ಲುವ ಸಾಧ್ಯತೆ ಜಾಸ್ತಿ. 

ನೆನಪಿಡಿ ಈ ಸೇವೆ ಬಳಸುವ ಜನ ಆರ್ಥಿಕವಾಗಿ ಸಬಲ ಆಗಿರುವವರ ಸಂಖ್ಯೆ ಜಾಸ್ತಿ. ಅವರ ಬಳಿ ಸ್ಮಾರ್ಟ್ ಫೋನ್ ಇದೆ ಇಂಟರ್ನೆಟ್ ಇದೆ. ತಿಳುವಳಿಕೆ ಇದೆ. ಇದ್ದಲ್ಲೇ ಬರುವ ಕ್ಯಾಬ್/ಆಟೋ ಬಳಸಬೇಕೋ ಬೇಡೋ ಅವರೇ ನಿರ್ಧರಿಸಲಿ. ಏನಂತೀರಾ?

ಗ್ರಾಹಕರ ಒಳಿತಿಗಾಗಿ ಹೋರಾಡುವ ನೆಪದಲ್ಲಿ ಇರುವ ಓಲಾ/ಉಬರ್ ರೀತಿಯ ಉತ್ತಮ ಸೌಲಭ್ಯ ಕಳೆದು ಕೊಂಡರೆ ನಾವು ಮತ್ತೆ ಹಳೆಯ ವ್ಯವಸ್ಥೆಗೆ ಹೋಗಬೇಕು. ಅದರಿಂದ ಅನುಕೂಲಕ್ಕಿಂತ ಅನಾನುಕೂಲವೇ ಜಾಸ್ತಿ! 

ಓಲಾ ಆಟೋ ಬ್ಯಾನ್ ಮಾಡುವದರಿಂದ ಮತ್ತೆ ಮೀಟರ್ ಹಾಕದೇ ಹೇಳಿದ ಬೆಲೆ ಕೊಡುವ ಅನಿವಾರ್ಯತೆ ಗ್ರಾಹಕರದ್ದಾಗಲಿದೆ. ಇಲ್ಲಾಂದ್ರೆ ಆಟೋ ಬದಲು ಓಲಾ / ಉಬರ್ ಕ್ಯಾಬ್ ಬಳಸ ಬೇಕು. ಅದೂ ಕೂಡಾ ಉತ್ತಮ ಪರ್ಯಾಯ ಮಾರ್ಗ.

ಇನ್ನು ಓಲಾ / ಉಬರ್ ಸೇವೆ ಬಳಸಲ್ಲ ನೇರವಾಗಿ ಆಟೋ / ಕ್ಯಾಬ್ ಬಳಸುತ್ತೇನೆ ಎನ್ನುವವರಿಗೆ ಮೀಟರ್ ಆಧಾರಿತ ಆಟೋ / ಕ್ಯಾಬ್ ಸೇವೆ ಲಭ್ಯ ರಸ್ತೆಗಳಲ್ಲಿ ಹೇಗೂ ಇದ್ದೇ ಇದೆ. ಅಲ್ವಾ? ಆಟೋ / ಕ್ಯಾಬ್ ಚಾಲಕರಿಗೂ ಮೀಟರ್ ಹಾಕಿ ಗ್ರಾಹಕರಿಗೆ ಸೇವೆ ನೀಡುವ ಸ್ವಾತಂತ್ರ್ಯ ಅವರು ಓಲಾ / ಉಬರ್ ಗೆ ರಿಜಿಸ್ಟರ್ ಆಗಿದ್ದರೂ ಆಗದಿದ್ದರೂ ಇದೆ. ಏನಂತೀರಾ? ನಿಮ್ಮ ಅನಿಸಿಕೆ ಏನು? ಕಮೆಂಟ್ ಹಾಕಿ.

ಓಲಾ / ಉಬರ್ ಸಮಸ್ಯೆಗಳು

ಹಾಗಂತ ಓಲಾ / ಉಬರ್ ಅಲ್ಲಿ ಸಮಸ್ಯೆ ಇಲ್ಲವೇ ಇಲ್ಲ ಏನಲ್ಲ. ಬನ್ನಿ ಯಾವವು ನೋಡೋಣ.

೧. ಆನ್ ಲೈನ್ ಪೇಮೆಂಟ್ ತಗೊಳ್ಳದ ಚಾಲಕರು

ಕೆಲವು ಚಾಲಕರು ಕ್ಯಾಶ್ ಬೇಕು ಎಂದು ಗ್ರಾಹಕರನ್ನು ಒತ್ತಾಯಿಸುತ್ತಾರೆ. ಅನೇಕ ಬಾರಿ ಕ್ಯಾನ್ಸೆಲ್ ಮಾಡುವದೂ ಇದೆ.

೨. ಬೇಡಿಕೆ ಆಧಾರದ ಮೇಲೆ ಜಾಸ್ತಿ ಬೆಲೆ ಆಗುವದು

ಪ್ರಾಮಾಣಿಕವಾಗಿ ಈ ಎಪ್ ಗಳು ಮೀಟರ್ ಮೇಲೆ ಅವರ ಸೇವೆಯ ಒಂದು ಚಾರ್ಜ್ ತೆಗೆದುಕೊಳ್ಳಬೇಕು. ಆದರೆ ಕೆಲವೊಮ್ಮೆ ತೀರಾ ದರ ಜಾಸ್ತಿ ಆಗುತ್ತೆ. ಬಹುಶಃ ಬೇಡಿಕೆ ಜಾಸ್ತಿ ಇದ್ದಾಗ ಹಾಗೆ ಮಾಡುತ್ತಾರೇನೋ. ಇದರ ಹಿಂದಿನ ಲಾಜಿಕ್ ನನಗೆ ಗೊತ್ತಿಲ್ಲ. ಇದು ನಿಲ್ಲಬೇಕು.

೩. ಡ್ಯೂಟಿ ಕ್ಯಾನ್ಸೆಲ್ ಅಥವಾ ಬರದ ಚಾಲಕರು

ಎಷ್ಟೋ ಬಾರಿ ಚಾಲಕರು ಬಂದು ಎಪ್ ಅಲ್ಲಿ ಕ್ಯಾನ್ಸೆಲ್ ಮಾಡಿ ಅಷ್ಟೇ ಹಣ ನಮಗೆ ಕೊಡಿ ಎಂದು ದುಂಬಾಲು ಬೀಳುತ್ತಾರೆ. ಅದು ಸರಿಯಲ್ಲ.  ಗ್ರಾಹಕರ ಸುರಕ್ಷತೆಯ ದೃಷ್ಟಿಯಿಂದ ಹಾಗೆ ಮಾಡುವದು ಒಳ್ಳೆಯದಲ್ಲ. 

ಅದಕ್ಕೆ ಮುಖ್ಯ ಕಾರಣ ಒಲಾ/ಉಬರ್ ತಮ್ಮ ಸೇವೆಗೆ ತೆಗೆದುಕೊಳ್ಳುವ ಕಮಿಶನ್ ಕೂಡಾ ತನಗೆ ಬೇಕು ಅನ್ನುವ ದುರಾಸೆ ಮುಖ್ಯ ಕಾರಣ. ಒಲಾ / ಉಬರ್ ಇಲ್ಲದಿದ್ದರೆ ಈ ಡ್ಯೂಟಿ ತನಗೆ ಸಿಗುತ್ತಿರಲಿಲ್ಲ ಎಂಬ ಪ್ರಬುದ್ಧತೆ ಇರುವದಿಲ್ಲ. 

ಅನೇಕ ಬಾರಿ ಚಾಲಕರು ಡ್ಯೂಟಿ ಒಪ್ಪಿದ್ದರೂ ಬರುವದೇ ಇಲ್ಲ. ಇದು ಎಪ್ ಸಮಸ್ಯೆ ಸಹ ಇರಬಹುದು.

ಆದರೆ ಅನೇಕ ಬಾರಿ ಒಲಾ/ಉಬರ್ ಹಾಕುವ ಕ್ಯಾನ್ಸೆಲ್ ಚಾರ್ಜ್ ಗ್ರಾಹಕ ತೆರ ಬೇಕಾಗುತ್ತದೆ.

೩. ಕೊನೆಯ ಕ್ಷಣದಲ್ಲಿ ಕ್ಯಾನ್ಸೆಲ್ ಮಾಡುವ ಗ್ರಾಹಕರು

ಇನ್ನು ಗ್ರಾಹಕರೂ ಕೂಡಾ ಕ್ಯಾಬ್/ಆಟೋ ಹಲವು ಕಿಮಿ ದೂರದಿಂದ ಗ್ರಾಹಕ ಇರುವಲ್ಲಿಗೆ ತಲುಪುವದರ ಒಳಗೆ ಕ್ಯಾನ್ಸೆಲ್ ಮಾಡಿ ಬಿಡುತ್ತಾರೆ. ಆಗ ಚಾಲಕರಿಗೂ ನಷ್ಟ / ಕಂಪನಿಗೂ ನಷ್ಟ. ಅದನ್ನು ತಡೆಯಲು ಗ್ರಾಹಕರಿಗೆ ಕೆಲವು ಬಾರಿ ದಂಡ ವಿಧಿಸುತ್ತಾರೆ.

ಕೊನೆಯ ಮಾತು

ಒಟ್ಟಿನಲ್ಲಿ ಹೇಳುವದಾದರೆ ಓಲಾ / ಉಬರ್ ಸಾರ್ವಜನಿಕ ಸಾರಿಗೆಯಲ್ಲಿ ಕ್ರಾಂತಿ ಮಾಡಿದೆ ಎಂದರೆ ತಪ್ಪಲ್ಲ. ಅದನ್ನು ಬಳಸಿ ಸಮಯ, ಸುರಕ್ಷತೆ, ಅನುಕೂಲತೆ ಹೀಗೆ ಪ್ರಯೋಜನಗಳಿವೆ. ಆದರೆ ಆ ಸೇವೆ ನಾರ್ಮಲ್ ಮೀಟರ್ ಕ್ಯಾಬ್/ಆಟೋ ಗಿಂತ ಕಡಿಮೆಗೆ ನಾವು ಸಿಗುತ್ತೆ ಅಂದುಕೊಂಡರೆ ಸಮಂಜಸವಲ್ಲ.

ಈ ಸೇವೆಯ ಮಹತ್ವ ಏನು, ಅದು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಗ್ರಾಹಕ / ಚಾಲಕ ಇಬ್ಬರೂ ಅರಿತಾಗ ಅದಕ್ಕೆ ತೆರಬೇಕಾದ ಹೆಚ್ಚಿನ ಬೆಲೆ ಯಾಕೆ ಎಂಬ ಪ್ರಬುದ್ಧತೆ ಬರುತ್ತದೆ.

ಈ ಹಿಂದೆ ಮೀಟರ್ ಇಲ್ಲದೇ ಬಾಯಿಗೆ ಬಂದ ಬೆಲೆಗೆ ಆಟೋ / ಕ್ಯಾಬ್ ಅಲ್ಲಿಗೆ ಹೋಗುವ ಅನುಭವ ಆದ ಗ್ರಾಹಕರಿಗೆ ಓಲಾ/ಉಬರ್ ಮಹತ್ವ ಏನು ಎಂಬುದು ಗೊತ್ತು! ಏನಂತೀರಾ?

ಚಿತ್ರಕೃಪೆ: 

ಚಿತ್ರ ೧: Hanny Naibaho on Unsplash

ಚಿತ್ರ ೨: Pop & Zebra on Unsplash

ಚಿತ್ರ ೩: charlesdeluvio on Unsplash

ವ್ಯಾಪಾರದಲ್ಲಿ ಗುಣಮಟ್ಟ ಇಲ್ಲದಿದ್ದರೆ ಉಳಿಗಾಲವಿಲ್ಲ

ಕೆಲವು ಅಂಗಡಿಗಳು, ಕಂಪನಿಗಳು ಚೆನ್ನಾಗಿ ನಡೆಯುತ್ತವೆ. ಇನ್ನೂ ಕೆಲವು ಚೆನ್ನಾಗಿ ನಡೆಯಲ್ಲ. ಇದಕ್ಕೆ ಒಂದು ಮುಖ್ಯ ಕಾರಣ. ಗುಣಮಟ್ಟ. ಹೇಗೆ ಗುಣಮಟ್ಟ ಉತ್ತಮ ಪಡಿಸಿಕೊಳ್ಳಬಹುದು? ಈ ಲೇಖನ ಓದಿ.

ಒಬ್ಬ ವ್ಯಾಪಾರಿ ಮಾರುವ ವಸ್ತುಗಳಲ್ಲಿ ಅಥವಾ ಸೇವೆಯಲ್ಲಿ ಗುಣಮಟ್ಟ ಇರಬೇಕಾದ್ದು ಅತಿ ಮುಖ್ಯ. ಒಂದು ಕಂಪನಿ ಕೂಡ ಉತ್ತಮ ಗುಣಮಟ್ಟದ ವಸ್ತುಗಳನ್ನು ತಯಾರಿಸಿದರೆ ಜನ ಹೆಚ್ಚು ಖರೀದಿಸುತ್ತಾರೆ. ಇಲ್ಲದಿದ್ದರೆ ಒಮ್ಮೆ ಖರೀದಿಸಿ ಬೇಸರವಾದ ಗ್ರಾಹಕ ಮತ್ತೆ ಆ ಅಂಗಡಿ ಕಡೆ ಸುಳಿಯುವುದಿಲ್ಲ. ಗುಣಮಟ್ಟದ ವ್ಯಾಖ್ಯಾನ ಕಾಲ ಕಾಲಕ್ಕೆ ಜನರಿಂದ ಜನರಿಗೆ ಬದಲಾಗುತ್ತಿರುತ್ತದೆ.

ಒಬ್ಬ ರೈತ ಕೂಡ ಉತ್ತಮ ಜಾತಿಯ ಬೀಜಗಳನ್ನು ಬಳಸಿ ರಾಸಾಯನಿಕ ವಿಷ ಬಳಸದೆ ಸಾವಯವ ರೀತಿಯಲ್ಲಿ ಬೆಳೆ ಬೆಳೆದರೆ ಅದಕ್ಕೆ ಬೆಲೆ ಜಾಸ್ತಿ. ನೆನಪಿಡಿ ಎಲ್ಲರೂ ಒಂದೇ ರೀತಿಯ ಗುಣಮಟ್ಟ ಅಪೇಕ್ಷಿಸುವುದಿಲ್ಲ. ಕೆಲವರು ಕಡಿಮೆ ಬೆಲೆಯಲ್ಲಿ ಸಾಧಾರಣ ಗುಣಮಟ್ಟ ಬಯಸಿದರೆ ಮಧ್ಯಮ ಬೆಲೆಯಲ್ಲಿ ಮಧ್ಯಮ ಗುಣಮಟ್ಟ ಹಾಗೂ ಆರ್ಥಿಕವಾಗಿ ಮುಂದುವರಿದವರು ಪ್ರೀಮಿಯಂ ಅಂದರೆ ಅತ್ಯುತ್ತಮ ಗುಣಮಟ್ಟ ಬಯಸುತ್ತಾರೆ. ಅದಕ್ಕಾಗಿ ಹೆಚ್ಚಿನ ಬೆಲೆ ಕೊಡಲು ಸಿದ್ಧರಿರುತ್ತಾರೆ.

ಒಂದು ಸಿನಿಮಾ, ಟಿವಿ ಕೂಡ ಗುಣಮಟ್ಟದ ಆಧಾರದ ಮೇಲೆ ಜನ ನೋಡುತ್ತಾರೆ.

ಅದಕ್ಕೆ ಎಲ್ಲ ಕಂಪನಿಗಳು ಬಜೆಟ್ ಮಧ್ಯಮ ಹಾಗೂ ಪ್ರೀಮಿಯಂ ರೇಂಜಿನಲ್ಲಿ ಬೇರೆ ಬೇರೆ ವಸ್ತುಗಳನ್ನು ತಯಾರಿಸುತ್ತಾರೆ. ಯಾರು ಪ್ರೀಮಿಯಂ ಗ್ರಾಹಕರಿಗೆ ವಸ್ತು ತಯಾರಿಸಿ ಅವರ ಮನ ಗೆಲ್ಲುತ್ತಾರೋ ಅವರು ಜಾಸ್ತಿ ಲಾಭಗಳಿಸಬಹುದು.

ಒಂದು ವಸ್ತು ಹಾಗೂ ಸೇವೆಯ ಗುಣಮಟ್ಟ ಹೇಗೆ ನಿರ್ಧಾರವಾಗುತ್ತದೆ. ಈ ಮುಂದಿನ ಅಂಶಗಳು ವಸ್ತು ಅಥವಾ ಸೇವೆಯ ಗುಣಮಟ್ಟ ಹಾಗೂ ಉತ್ತಮ ಅನುಭವಕ್ಕೆ ಕಾರಣ.

ಹೊಸತಾದ ತಾಜಾ ವಸ್ತುಗಳು

ವಸ್ತು ಹೊಸದಾಗಿ ಇದ್ದರೆ ಗುಣಮಟ್ಟ ಒಳ್ಳೆಯದು. ಉದಾಹರಣೆಗೆ ತರಕಾರಿ, ಹಣ್ಣು, ಹಾಲು ಮೊಸರು ಇತ್ಯಾದಿ ಈಗ ತಾನೆ ಉತ್ಪಾದಿಸಿದರೆ ಅದು ಉತ್ತಮ. ಸಮಯ ಕಳೆದಂತೆ ಗುಣಮಟ್ಟ ಕಡಿಮೆ ಆಗುತ್ತದೆ. ಆದರೆ ಕೆಲವು ವಸ್ತುಗಳು ಹಳತಾದಂತೆ ಗುಣಮಟ್ಟ ಹೆಚ್ಚುತ್ತದೆ. ಉದಾಹರಣೆಗೆ ಅಕ್ಕಿ ಹೊಸತಿಗಿಂತ ಒಂದು ಎರಡು ವರ್ಷ ಹಳೆಯದು ಆದರೆ ಅದಕ್ಕಿಂತ ಉತ್ತಮ. ಹಾಗೆಯೇ ಮದ್ಯಪೇಯ ಹಳತಾದಷ್ಟು ಬೆಲೆ ಗುಣಮಟ್ಟ ಜಾಸ್ತಿ.

ಸಾಧ್ಯವಾದಷ್ಟು ಹೊಸ ವಸ್ತುಗಳು ತನ್ನ ಅಂಗಡಿಯಲ್ಲಿ ಇರುವಂತೆ ನೋಡಿಕೊಳ್ಳಬೇಕು. ಎಷ್ಟು ಖರ್ಚಾಗುತ್ತೆ ಅಷ್ಟೇ ಮಾಡಬೇಕು. ಒಂದೆರಡು ಜನಕ್ಕೆ ಖಾಲಿಯಾಗಿದೆ ಎಂದರೂ ಪರವಾಗಿಲ್ಲ, ಹೆಚ್ಚಿನ ದಿನ ವ್ಯಾಪಾರ ವಾಗುವಷ್ಟೇ ವಸ್ತುಗಳ ತರಿಸುವುದು ಉತ್ತಮ. ಕಂಪನಿಗಳು ಸಹ ಎಷ್ಟು ಖರ್ಚಾಗುತ್ತೋ ಅಷ್ಟೇ ಉತ್ಪಾದಿಸಬೇಕು. ರೈತರೂ ಕೂಡ ತಾಜಾ ತರಕಾರಿ, ಹಣ್ಣು ಕಿತ್ತು ಮಾರಿದರೆ ಒಳ್ಳೆಯದು.

ಹುಳುಕಿಲ್ಲದ, ಒಡೆಯದ ವಸ್ತುಗಳು

ಮಾರುವ ವಸ್ತುಗಳು ಹುಳುಕಿಲ್ಲದಂತೆ ಒಡೆಯದ ಹಾಗೆ ವ್ಯಾಪಾರಿ ನೋಡಿಕೊಳ್ಳಬೇಕು.ಒಬ್ಬ ಕಿರಣಿ ಅಂಗಡಿಯಲ್ಲಿ ಅಕ್ಕಿ ಗೋಧಿ ಹಿಡಿಯದಂತೆ ನೋಡಿಕೊಳ್ಳಬೇಕು. ಇಲ್ಲಿ ಜಿರಳೆಗಳು ಬರದಂತೆ ಸಂಗ್ರಹಿಸಬೇಕು. ಆದರೆ ಇದಕ್ಕೆ ವಿಷಕಾರಿ ರಾಸಾಯನಿಕ ಬಳಸಬಾರದು. 

ವಸ್ತುಗಳನ್ನು ಸಾಗಿಸುವಾಗ ಗೋಡೌನ್ ನಿಂದ (ಸಂಗ್ರಹಗಾರ) ತರುವಾಗ ಬೀಳದಂತೆ ನೀರಿನಿಂದ ದೂಳಿನಿಂದ ಹಾಳಾಗದಂತೆ ನೋಡಿಕೊಳ್ಳಬೇಕು. ಒಬ್ಬ ರೈತ ಕೂಡ ತನ್ನ ಗದ್ದೆಯ ತೋಟಕ್ಕೆ ಹುಳ ಹಿಡಿಯದಂತೆ ಬೇವಿನ ಎಣ್ಣೆ ಮೊದಲಾದ ಸಾವಯವ ರೀತಿ ಬಳಸಬೇಕು. ಉತ್ತಮ ಹುಳುಕಿಲ್ಲದ ಡ್ಯಾಮೇಜ್ ಆಗದ ಕೊಟ್ಟರೆ ಗ್ರಾಹಕ ಮತ್ತೆ-ಮತ್ತೆ ಬರುತ್ತಾನೆ.

ಕೆಲವೊಮ್ಮೆ ಕಣ್ತಪ್ಪಿ ಗ್ರಾಹಕರಿಗೆ ಕೊಟ್ಟಿದ್ದರು ಅಥವಾ ಆತ ವಾಪಸ್ ದೂರಿನೊಂದಿಗೆ ಬಂದಾಗ ಪರಿಹಾರ ನೀಡುವುದು ಒಳ್ಳೆಯದು.

  • ಬದಲಿ ವಸ್ತು ನೀಡುವುದು.
  • ದರದಲ್ಲಿ ರಿಯಾಯಿತಿ ನೀಡುವುದು (ಬಳಸುವ ಹಾಗಿದ್ದರೆ).
  • ಹಣ ವಾಪಸ್ ನೀಡುವುದು.

ಹೆಚ್ಚಿನ ಕಂಪನಿಗಳು ನಿರ್ಮಾಣ ದೋಷದ ವಸ್ತುಗಳನ್ನು ವಾಪಸ್ ಪಡೆದುಕೊಳ್ಳುತ್ತವೆ. ಆದರೆ ನೆನಪಿಡಿ ಅಂಗಡಿಕಾರನೆ, ರೈತನೇ, ಕಂಪನಿ ವಸ್ತುವಿನ ಗುಣಮಟ್ಟ ಮೊದಲೇ ಪರಿಶೀಲಿಸಿ ಕೊಡದೇ ಇದ್ದರೆ ಇನ್ನೂ ಒಳ್ಳೆಯದು. ಅದು ಸಾಗಣೆ ಉಳಿತಾಯ ಮಾಡುತ್ತದೆ. ಯಾವುದೇ ಕಾರಣಕ್ಕೂ ಗ್ರಾಹಕರ ಬಳಿ ವಾದ ಮಾಡಿ ಮನಸ್ತಾಪ ಮಾಡಿಕೊಳ್ಳಬೇಡಿ. ಮುಂದೆ ಹಾಗಾಗದಂತೆ ಜಾಗರೂಕತೆ ವಹಿಸಿ.

ಸರಿಯಾದ ಗಾತ್ರ, ಆಕಾರ, ಪ್ರಮಾಣ, ಲೆಕ್ಕ

ಡ್ರೆಸ್ ಚಪ್ಪಲಿ ಇತ್ಯಾದಿ ವಸ್ತುಗಳಿಗೆ ಸರಿಯಾದ ಗಾತ್ರ ಅತಿ ಮುಖ್ಯ. ಅದಕ್ಕೆ ಟ್ರಯಲ್ ಮಾಡಿಯೇ ಖರೀದಿಸುವಂತಿದ್ದರೆ ಒಳ್ಳೆಯದು. ಹಾಗೆ ಸರಿಯಾದ ಪ್ರಮಾಣ ಹಾಗೂ ಲೆಕ್ಕ ಕೂಡ ಮುಖ್ಯ. ಯಾವುದೇ ಕಾರಣಕ್ಕೆ ಕೆಲಸಗಾರರು ಕಡಿಮೆ ಪ್ರಮಾಣ ಅಥವಾ ಲೆಕ್ಕ ಕೊಡದಂತೆ ಎಚ್ಚರದಿಂದಿರಿ. ಪ್ರಮಾಣದಲ್ಲಿ ಮೋಸ ಮಾಡಿದಾಗ ಅದು ಗ್ರಾಹಕರ ಬೇಸರಕ್ಕೆ ಕಾರಣವಾಗುತ್ತದೆ. ಎಚ್ಚರಿಕೆ ಕೊಟ್ಟರೂ ಆ ತರಹ ಮೋಸ ಮಾಡುವ ಕೆಲಸಗಾರರನ್ನು ಕಿತ್ತು ಹಾಕಿ.

ಇತ್ತೀಚಿನ ತಂತ್ರಜ್ಞಾನ

ಹಳೆಯ ತಂತ್ರಜ್ಞಾನ ಬಳಸಬೇಡಿ ಅಥವಾ ಹಳೆಯ ತಂತ್ರಜ್ಞಾನ ವಸ್ತುವನ್ನು ಮಾಡಬೇಡಿ. ಹೊಸ ತಂತ್ರಜ್ಞಾನದ ವಸ್ತುವನ್ನು ಮಾರಾಟ ಮಾಡಿರಿ.

ಸಮಯ

ಗ್ರಾಹಕ ಆರ್ಡರ್ ನೀಡಿದ ಮೇಲೆ ತಲುಪಿಸುವ ಸಮಯ ರಿಪೇರಿಗೆ ತೆಗೆದುಕೊಳ್ಳುವ ಸಮಯ ಕೂಡ ಮುಖ್ಯ. ತಡ ಮಾಡಿದಷ್ಟೂ ಗ್ರಾಹಕರಿಗೆ ಕಹಿ ಅನುಭವವಾಗುತ್ತದೆ. ಬೇಗ ಸೇವೆ ನೀಡಲು ಜನ ಜಾಸ್ತಿ ಬೇಕಿದ್ದರೆ, ಜಾಗ ಜಾಸ್ತಿ ಬೇಕಿದ್ದರೆ ಜನರನ್ನು ಕೆಲಸಕ್ಕೆ ತೆಗೆದುಕೊಳ್ಳಲು ಹಿಂದೆ ಮುಂದೆ ನೋಡಬೇಡಿ. ಎಲ್ಲವನ್ನೂ ಒಬ್ಬನೇ ಮಾಡುತ್ತೇನೆ ಅನ್ನುವ ಮನೋಭಾವ ಒಳ್ಳೆಯದಲ್ಲ. ಅದು ನಿಮ್ಮ ವ್ಯಾಪಾರವನ್ನು ಬೆಳೆಯದಂತೆ ಮಾಡುತ್ತದೆ.

ವ್ಯಾಪಾರದ ನಂತರ ನೀಡುವ ಸೇವೆ

ಒಂದು ವಸ್ತು ಮಾರಾಟದ ನಂತರ ಅನೇಕ ಸಮಸ್ಯೆಗಳು ಬರಬಹುದು ಆ ಸಮಸ್ಯೆಗಳಿಗೆ ಪರಿಹಾರ ಅಥವಾ ನೀಡುವ ಬೆಂಬಲ ಕೂಡ ಗುಣಮಟ್ಟ ನಿರ್ಧರಿಸುತ್ತದೆ. ಅಕಸ್ಮಾತ್ ಸರಿಪಡಿಸಲಾಗದಿದ್ದರೆ ಹೊಸ ವಸ್ತು ಕೊಡಬೇಕು. ಅದು ಕಂಪನಿಯ ಜವಾಬ್ದಾರಿ.

ಜಾಸ್ತಿ ಬಾಳಿಕೆ ಬರುವುದು ಹಾಗೂ ಕಡಿಮೆ ಸಮಸ್ಯೆ

ಒಂದು ವಸ್ತು ತುಂಬಾ ವರ್ಷಗಳವರೆಗೆ ಯಾವುದೇ ಸಮಸ್ಯೆ ಕೊಡದೆ ಬಾಳಿಕೆ ಬಂದರೆ ಅದರ ಗುಣಮಟ್ಟ ಜಾಸ್ತಿ ಎಂದರ್ಥ. ಉತ್ತಮ ಗುಣಮಟ್ಟದ ಬಿಡಿಭಾಗಗಳು ವಿನ್ಯಾಸದಿಂದ ಮಾತ್ರ ಇದು ಸಾಧ್ಯ.

ಹೆಚ್ಚಿನ ಉತ್ತಮ ಬ್ರ್ಯಾಂಡ್ ಗಳು ಹಾಗೂ ಕಂಪನಿಗಳು ತಮ್ಮ ವಸ್ತುವಿನ ಗುಣಮಟ್ಟದ ಬಗ್ಗೆ ತುಂಬಾ ಕಾಳಜಿ ವಹಿಸುತ್ತವೆ. ನೆನಪಿಡಿ ಉತ್ತಮ ಗುಣಮಟ್ಟ ಇದ್ದರೂ ಬೆಲೆ ಕೈಗೆಟುಕದಂತೆ ಇದ್ದರೆ ಕೂಡ ಗ್ರಾಹಕರು ಸಿಗೋದು ಕಷ್ಟ.

ಕಾರ್ಯ ಶೀಲತೆಯ ತುಂಬಾ ಮುಖ್ಯ

ಕಡಿಮೆ ಕರೆಂಟ್ , ಪೆಟ್ರೋಲ್ ಇಂಧನ ಬಳಸುವ ವಸ್ತು ಕೂಡ ಉತ್ತಮ. ಆ ಕಾರ್ಯಕ್ಷಮತೆಯಿಂದ ಗುಣಮಟ್ಟ ನಿರ್ಧಾರವಾಗುತ್ತದೆ. ಜನ ಜಾಸ್ತಿ ಕರೆಂಟು ಇಂಧನ ಬಳಸುವ ವಸ್ತುವನ್ನು ಇಷ್ಟಪಡುವುದಿಲ್ಲ.

ಗುಣಮಟ್ಟದ ದೃಷ್ಟಿಯಿಂದ ಸಲಹೆಗಳು ಹೀಗಿವೆ

ಅಂಗಡಿಯ ವ್ಯಾಪಾರಿಗಳಿಗೆ

  • ವಸ್ತುಗಳು ತಾಜಾ ಆಗಿ ಇದ್ದಷ್ಟು ಉತ್ತಮ. ಸಾಧ್ಯವಿದ್ದಷ್ಟು ಹಳೆಯ ವಸ್ತುಗಳನ್ನು ವಿಲೇವಾರಿ ಮಾಡಿ.
  • ಧೂಳು ಹಿಡಿಯದಂತೆ ಕಾಳಜಿವಹಿಸಿ. ಪ್ರತಿದಿನ ನಿಯಮಿತವಾಗಿ ಧೂಳು ಹೊಡೆದು ಸ್ವಚ್ಛಗೊಳಿಸಿ.
  • ಇರುವೆ, ಇಲಿ, ಜಿರಲೆ, ಹುಳುಗಳಿಂದ ವಸ್ತು ಹಾಳಾಗದಂತೆ ಜಾಗರೂಕರಾಗಿರಿ. ಮುಚ್ಚಳವಿರುವ ಕಂಟೇನರ್ ಬಳಸಿ.
  • ಉತ್ತಮ ಗುಣಮಟ್ಟದ ವಸ್ತು/ಬ್ರ್ಯಾಂಡ್ ಮಾರಾಟ ಮಾಡಿ. ಕಡಿಮೆ ಬೆಲೆ ಎಂದು ಕಳಪೆ ಗುಣಮಟ್ಟದ ವಸ್ತುಗಳನ್ನು ಮಾರಾಟ ಮಾಡಬೇಡಿ. ಎಲ್ಲ ವಸ್ತುಗಳು ಬಾಳಿಕೆ ಬರುವಂಥವು ಆಗಿರಲಿ.
  • ದಿನ ಬೆಳಿಗ್ಗೆ ಹಾಳಾದ ತರಕಾರಿ, ಹಣ್ಣು, ಅವಧಿ ಮುಗಿದ ವಸ್ತು ಪರಿಶೀಲಿಸಿ ಅವನ್ನು ಬಿಸಾಕಿ.
  • ಗ್ರಾಹಕರಿಗೆ ಕೊಡುವಾಗ ಇನ್ನೊಮ್ಮೆ ಗುಣಮಟ್ಟ ಪರಿಶೀಲಿಸಿ.
  • ಸರಿಯಾದ ಗಾತ್ರ ಟ್ರಯಲ್ ಮಾಡಿ ಗ್ರಾಹಕರಿಗೆ ವಸ್ತು ನೀಡಿ.
  • ಸರಿಯಾದ ಪ್ರಮಾಣ ಹಾಗೂ ಲೆಕ್ಕದ ಪ್ರಕಾರ ವಸ್ತು ನೀಡಿ.
  • ಅಕಸ್ಮಾತ ನೀಡಿದ ವಸ್ತು ಸರಿಯಿಲ್ಲವೆಂದು ಗ್ರಾಹಕರು ಬಂದರೆ ಪರಿಹಾರ ನೀಡಿ. ಮುಂದೆ ಹಾಗಾಗದಂತೆ ಜಾಗರೂಕತೆ ವಹಿಸಿ.
  • ಕಂಪನಿಯವರು ಉಚಿತವಾಗಿ ಕೊಟ್ಟರೂ ಕಳಪೆ ಗುಣಮಟ್ಟದ ವಸ್ತು ಇಡಬೇಡಿ.
  • ಹಾಕಿಸುವಾಗ ಯಾವುದೇ ವಸ್ತುಗಳು ಹಾಳಾಗದಂತೆ ನೋಡಿಕೊಳ್ಳಿ.
  • ನೀರು ಸೂರ್ಯನ ಬಿಸಿಲು ಇತ್ಯಾದಿಗಳಿಂದ ವಸ್ತು ಹಾಳಾಗದಂತೆ ನೋಡಿಕೊಳ್ಳಿ

ಕಂಪನಿಗಳಿಗೆ

  • ಉತ್ತಮ ಗುಣಮಟ್ಟದ ಹಾಗೂ ಕಾರ್ಯಶೀಲತೆ ಇರುವ ವಸ್ತು ವಿನ್ಯಾಸಗೊಳಿಸಿ.
  • ಉತ್ತಮ ಗುಣಮಟ್ಟದ ಬಿಡಿಭಾಗಗಳನ್ನು ಬಳಸಿ.
  • ಬಜೆಟ್ ಮೀಡಿಯಂ ಪ್ರೀಮಿಯಂ ಇರಲಿ. ಆದರೆ ಗುಣಮಟ್ಟದಲ್ಲಿ ರಾಜಿ ಬೇಡ. ಬಜೆಟ್ ವಸ್ತು ಕಡಿಮೆ ಫೀಚರ್ ಸೌಲಭ್ಯ ನೀಡಲಿ ಆದರೆ ಉತ್ತಮ ಬಾಳಿಕೆ ಬರಬೇಕು. ಸಮಸ್ಯೆ ನೀಡಬಾರದು.
  • ಎಲ್ಲ ಸಮಸ್ಯೆಗಳನ್ನು ಗ್ರಾಹಕರಿಂದ ತಿಳಿದು ಅದಕ್ಕೆ ಪರಿಹಾರ ನೀಡಿ. ಮುಂದೆ ಹಾಗಾಗದಂತೆ ನೋಡಿಕೊಳ್ಳಿ.
  • ಸಾಗಣೆಯಲ್ಲಿ ಸಂಗ್ರಹಿಸಿಡುವುದು ಯಾವುದೇ ವಸ್ತುಗಳು ಹಾಳಾಗದಂತೆ ಹೆಚ್ಚಾಗದಂತೆ ನೋಡಿಕೊಳ್ಳಿ.
  • ನಂತರದ ಸೇವೆ ತುಂಬಾ ಮುಖ್ಯ.
  • ಹೊಸ ತಂತ್ರಜ್ಞಾನ ಬಳಸಿ.

ರೈತರಿಗೆ

  • ಉತ್ತಮ ಗುಣಮಟ್ಟದ ಗೊಬ್ಬರ ಬೀಜ ಬಳಸಿ.
  • ಹಾನಿಕಾರಕ ರಾಸಾಯನಿಕ ಬಳಸದಿರಿ.
  • ಕೊಯ್ದ ತರಕಾರಿ ಹಣ್ಣು ತಾಜಾ ಆಗಿರುವಾಗ ಮಾರುಕಟ್ಟೆಗೆ ಗ್ರಾಹಕರಿಗೆ ತಲುಪಿಸಿ.
  • ಸಾಗಣೆಯಲ್ಲಿ ಸಂಗ್ರಹಿಸುವಾಗ ಹಾಳಾಗದಂತೆ ಹುಳ ಇಲಿ ಜಿರಲೆ ಇಂದ ನಾಶವಾಗದಂತೆ ಕಾಳಜಿವಹಿಸಿ.
  • ಎಂದಿಗೂ ಕಳಪೆ ಗುಣಮಟ್ಟದ ಧಾನ್ಯ ಬೆಳೆ ಬೆಳೆಯದಿರಿ.

ನೌಕರರಿಗೆ

  • ನಿಮ್ಮ ಕೆಲಸದ ಗುಣಮಟ್ಟ ಚೆನ್ನಾಗಿರಲಿ.
  • ಕೆಲಸ ಸರಿಯಾಗಿ ಕಲಿತು ಗಮನಕೊಟ್ಟು ಮಾಡಿ.
  • ಉತ್ತಮ ಗುಣಮಟ್ಟದ ವಸ್ತು ಸೇವೆ ನಿಮ್ಮ ಗುರಿಯಾಗಿರಲಿ.
  • ಯಾವಾಗಲೂ ಉತ್ತಮ ತಂತ್ರಜ್ಞಾನ ಬಳಸಿ.
  • ಬಾರಿ ಶ್ರಮದಿಂದ ಅಷ್ಟೇ ಅಲ್ಲ ಚಾಣಾಕ್ಷತೆಯಿಂದ ಕೆಲಸ ಮಾಡಿ.
  • ಪ್ರಾಮಾಣಿಕತೆಯಿಂದ ಕೆಲಸ ಮಾಡಿ.
  • ಆಫೀಸಲ್ಲಿ ಕೆಲಸದ ಸಮಯದಲ್ಲಿ ಕಾಲ್, ಸೋಷಿಯಲ್ ಮೀಡಿಯಾ ಇತ್ಯಾದಿ ಕಾಲಹರಣದಿಂದ ದೂರ ಇರಿ.

ಷೇರು ಮಾರುಕಟ್ಟೆಯಲ್ಲಿ ಬಂಡವಾಳ ಹೂಡುವವರಿಗೆ

  • ಗುಣಮಟ್ಟದ ಷೇರು ಖರೀದಿಸಿ.
  • ಮಾರುಕಟ್ಟೆಯ ಬಗ್ಗೆ ಶಿಕ್ಷಣ ಪಡೆದುಕೊಳ್ಳಿ.

ಕೊನೆಯ ಮಾತು

ಗ್ರಾಹಕರ ಸಂತೃಪ್ತಿಯೇ ವ್ಯಾಪಾರದ ಮುಖ್ಯ ಗುರಿ. ವಸ್ತುವಿನ ಗುಣಮಟ್ಟ, ಸೇವೆಯ ಗುಣಮಟ್ಟ ಮತ್ತೆ ಮತ್ತೆ ಗ್ರಾಹಕರನ್ನು ನಿಮ್ಮ ವ್ಯಾಪಾರದ ಕಡೆಗೆ ಬರುವಂತೆ ಮಾಡುತ್ತದೆ. ಗ್ರಾಹಕರು ನಿಮ್ಮ ವ್ಯಾಪಾರವನ್ನು ಸ್ನೇಹಿತರಿಗೆ ನೆಂಟರಿಗೆ ತಿಳಿಸಿ ಇನ್ನಷ್ಟು ಗ್ರಾಹಕರನ್ನು ಕಳುಹಿಸುತ್ತಾರೆ.

ಗುಣಮಟ್ಟವನ್ನು ಪರಾಮರ್ಶೆ ಗೊಳಿಸಿ ಎಲ್ಲೆಲ್ಲಿ ಸಾಧ್ಯವೋ ಇಂಪ್ರೂ ಮಾಡಿ. ಮೊದಲು ಯೋಜನೆ ಹಾಕಿ ಕೊಂಡು ಕಾರ್ಯಗತಗೊಳಿಸಿ ಮುಂದಿನ ಭಾಗದಲ್ಲಿ ಹೊಸ ವಿಷಯದೊಂದಿಗೆ ವ್ಯಾಪಾರ ಗುಟ್ಟು ಬರಲಿದೆ

ಈ ಲೇಖನ ವಿಸ್ಮಯ ಪತ್ರಿಕೆಯಲ್ಲಿ ೨೦ ಸಪ್ಟೆಂಬರ್ ೨೦೧೯ ರಂದು ಪ್ರಕಟ ಆಗಿತ್ತು.

ವ್ಯಾಪಾರ ಎಂದರೇನು?

ವ್ಯಾಪಾರ ಎಂದರೇನು? ಹಣ ಹೇಗೆ ಹುಟ್ಟಿತು? ವ್ಯಾಪಾರಿ ಹಾಗೂ ಆತನ ಗುರಿ ಏನು? ವ್ಯಾಪಾರದಲ್ಲಿ ಹಣ ಮಾಡೋದು ತಪ್ಪಾ? ಈ ಕುತೂಹಲಕರ ಪ್ರಶ್ನೆಗೆ ಉತ್ತರ ಈ ಲೇಖನ ನೀಡಲಿದೆ. ತಿಳಿಯಲು ಮುಂದೆ ಓದಿ?

ಇಂದಿನ ಕಾಲದಲ್ಲಿ ಬ್ಯುಸಿನೆಸ್ ಸ್ಕಿಲ್ ಅರ್ಥಾತ್ ವ್ಯಾಪಾರಿ ತಂತ್ರ ಎಲ್ಲರಿಗೂ ತುಂಬಾ ಮುಖ್ಯ.

ಒಬ್ಬ ಕಂಪನಿ ಅಥವಾ ಅಂಗಡಿ ನಡೆಸುವವರಿಗಂತೂ ವ್ಯಾಪಾರಿ ಜಾಣ್ಮೆ ಇಲ್ಲದಿದ್ದರೆ ನಷ್ಟವಾಗಿ ಮುಚ್ಚುವದು ಖಚಿತ.

ಆದರೆ ನೀವು ಒಬ್ಬ ಸಾಫ್ಟವೇರ್ ಇಂಜಿನಿಯರ್ ಆಗಿರಲಿ, ರೈತರೇ ಆಗಿರಲಿ, ಬ್ಯಾಂಕ್ ಮ್ಯಾನೆಜರ್ ಕೂಡಾ ಆಗಿರಲಿ. ಸ್ವಲ್ಪ ವ್ಯಾಪಾರಿ ಜಾಣ್ಮೆ ಇದ್ದರೆ ನೀವು ಯಶಸ್ಸು ಗಳಿಸುವ ಸಾಧ್ಯತೆ ಜಾಸ್ತಿ ಆಗುತ್ತೆ.

ಇದಕ್ಕೆ ಯಾವುದೇ ಡಿಗ್ರೀ ಬೇಕಿಲ್ಲ. ಸ್ವಲ್ಪ ಕಾಮನ್ ಸೆನ್ಸ್, ಕಲಿಯುವ ಹಂಬಲ ಇದ್ರೆ ಸಾಕು.

ಬನ್ನಿ ಈ ಪುಟದಲ್ಲಿ ವ್ಯಾಪಾರದ ಬಗ್ಗೆ ತಿಳಿಯೋಣ.

ವ್ಯಾಪಾರ ಎಂದರೆ?

 ವ್ಯಾಪಾರ ಎಂದರೆ ಖರೀದಿಸುವುದು ಮತ್ತೆ ಮಾರಾಟಮಾಡುವುದು. ಅರ್ಥಾತ್ ಕ್ರಯ (ಖರೀದಿ) ಹಾಗೂ ವಿಕ್ರಯ(ಮಾರಾಟ). ಇದೊಂದು ರೀತಿಯಲ್ಲಿ ತನ್ನ ಬಳಿ ಅಪಾರ ವಾಗಿರುವುದನ್ನು ವ್ಯಯಿಸುವುದು ಅದಕ್ಕೆ ಪ್ರತಿಫಲ ನಿರೀಕ್ಷಿಸುವದು.

ಅದು ವಸ್ತು ಇರಬಹುದು ಅಥವಾ ಕೇವಲ ಸೇವೆ ಕೂಡಾ ಆಗಿರಬಹುದು. ಒಟ್ಟಿನಲ್ಲಿ ಅದರ ಅಗತ್ಯ ಗ್ರಾಹಕರು ಅರ್ಥಾತ್ ಕಸ್ಟಮರ್ ಗೆ ಇರಬೇಕು ಅಷ್ಟೇ.

ಹಣ ಎಂದರೇನು?

ಇಂದಿನ ಕಾಲದಲ್ಲಿ ಮಾರಿದ ವಸ್ತು ಅಥವಾ ಮಾಡಿದ ಕೆಲಸಕ್ಕೆ ಪ್ರತಿಫಲ ಎಂದರೆ ದುಡ್ಡು/ ಹಣ / ಮನಿ.

ಸಾವಿರಾರು ವರ್ಷಗಳ ಹಿಂದೆ ಈ ಹಣ ಎನ್ನೋದೇ ಇರಲಿಲ್ಲ. ಆಗ ಬರಿ ವಸ್ತುಗಳ ವಿನಿಮಯ ನಡೆಯುತ್ತಾ ಇತ್ತು.

ಆಗ ಅಕ್ಕಿ ಬೆಳೆದ ರೈತ ತಮ್ಮ ಕುಟುಂಬಕ್ಕೆ ಸಾಕಾಗುವಷ್ಟು ಅಕ್ಕಿ ಇಟ್ಟುಕೊಂಡು ಉಳಿದ ಅಕ್ಕಿಯನ್ನು ಬೇರೆಯವರೊಂದಿಗೆ ಗೋಧಿ, ಸಾಂಬಾರ ಪದಾರ್ಥ, ಹಣ್ಣು ಹೀಗೆ ಇತರ ವಸ್ತುಗಳಿಗಾಗಿ ವಿನಿಮಯ ಮಾಡಿಕೊಳ್ಳುತ್ತಿದ್ದನು. ಅದೇ ರೀತಿ ಕೆಲಸಗಾರರಿಗೆ ಕೂಡಾ ಸಂಬಳ ರೂಪದಲ್ಲಿ ವಸ್ತುಗಳನ್ನು ಕೊಡುವದು ವಾಡಿಕೆಯಲ್ಲಿ ಇತ್ತು.

ಕಾಲ ಕ್ರಮೇಣ ಹೀಗೆ ವಿನಿಮಯ ಮಾಡಿ ಪಡೆದ ವಸ್ತುಗಳು ಮಿಕ್ಕಿದಾಗ ತುಂಬಾ ದಿನ ಇಟ್ಟು ಕೊಳ್ಳುವದು ಕಷ್ಟ ಎಂದು ಜನಕ್ಕೆ ಅರಿವಾಯ್ತು. ಕ್ರಮೇಣ ಹಾಳೆಯ ಮೇಲೆ ಲೆಕ್ಕಾಚಾರ ಬರೆದಿಡುವದು, ಕಂಚಿನ ನಾಣ್ಯ ರೂಪದಲ್ಲಿ ನೀಡುವದು ಹೀಗೆ ರೂಢಿ ಮಾಡಿ ಕೊಂಡರು.

ಅದಕ್ಕಾಗೇ ಈ ಹಣ ಎಂಬುದು ವಾಡಿಕೆಗೆ ಬಂತು. ರಾಜರು ಚಿನ್ನ, ಬೆಳ್ಳಿ, ಕಂಚು, ತಾಮ್ರ ಮೊದಲಾದ ಲೋಹಗಳಿಂದ ನಾಣ್ಯ ಮಾಡಿ ಹಂಚುತ್ತಿದ್ದರು. ಅದನ್ನೇ ಹಣದ ರೂಪದಲ್ಲಿ ಜನ ಬಳಸುತ್ತಿದ್ದರು. ಇತ್ತೀಚೆಗೆ ಕಾಗದದ ನೋಟುಗಳು, ಡಿಜಿಟಲ್ ಕರೆನ್ಸಿ ಕೂಡಾ ಬಂದಿವೆ.

ಒಬ್ಬ ವ್ಯಕ್ತಿಗೆ ಹಣ ಪ್ರಾಮಾಣಿಕವಾಗಿ ದೊರೆಯುವದು ಯಾವುದಾದರೂ ವಸ್ತು ಅಥವಾ ಸೇವೆಯನ್ನು ನೀಡಿದಾಗ ಮಾತ್ರ. ಇಲ್ಲಾಂದ್ರೆ ಯಾರಾದ್ರು ನಿಮಗೆ ಗಿಫ್ಟ್ ಅಥವಾ ದಾನ ರೂಪದಲ್ಲಿ ನೀಡಬೇಕು.

ವ್ಯಾಪಾರಿ ಯಾರು?

ಜೀವನೋಪಾಯಕ್ಕೆ ವ್ಯಾಪಾರ ಮಾಡುವವನನ್ನು ವ್ಯಾಪಾರಿ ಎನ್ನುತ್ತಾರೆ. ಇಂದು ವ್ಯಾಪಾರ ಮಾಡುವ ಅನುಭವ ಎಲ್ಲರಿಗೂ ಅವಶ್ಯಕ. ಆ ಜಾಣತನ ಇರುವವರೇ ಮಾರುಕಟ್ಟೆಯಲ್ಲಿ ಗೆಲ್ಲುತ್ತಾರೆ. ಒಬ್ಬ ರೈತ ಕೂಡ ವ್ಯಾಪಾರಿ ಚಾಕಚಕ್ಯತೆ ಇದ್ದರೆ ಉತ್ತಮ ಲಾಭ ಪಡೆಯಬಲ್ಲ. ಒಬ್ಬ ನೌಕರ ಕೂಡಾ ವ್ಯಾಪಾರಿ ತಂತ್ರಗಳನ್ನು ತನ್ನ ಕೆಲಸದಲ್ಲಿ ಬಳಸಿ ಇತರರನ್ನು ಹಿಂದೆ ಹಾಕಬಹುದು.

ಒಬ್ಬ ವ್ಯಾಪಾರಿ ತನ್ನ ಸಂಪೂರ್ಣ ಜೀವನ ನಿರ್ವಹಣೆಗೆ ವ್ಯಾಪಾರದಲ್ಲಿ ಬರುವ ಲಾಭದ ಮೇಲೆ ಅವಲಂಬಿಸಿರುತ್ತಾನೆ. ವ್ಯಾಪಾರದಲ್ಲಿ ಆಗುವ ಖರ್ಚು ಕಳೆದು ಅದರಲ್ಲಿ ಲಾಭಗಳಿಸುವುದು ತುಂಬಾ ಮುಖ್ಯ.

ಲಾಭ-ನಷ್ಟ ಇವೆರಡು ವ್ಯಾಪಾರದಲ್ಲಿ ಸಾಮಾನ್ಯ. ಬುದ್ಧಿವಂತಿಕೆ ಇದ್ದರೆ ಇದ್ದರೆ ಒಬ್ಬ ವ್ಯಾಪಾರಿ ತನ್ನ ಬಿಸಿನೆಸ್ಸ್ ಅನ್ನು ಲಾಭದ ಕಡೆಗೆ ಒಯ್ಯ ಬಲ್ಲ. ಆದರೆ ವ್ಯಾಪಾರ ಅನ್ನೋದು ಎಲ್ಲರಿಗೂ ಕೈಗೂಡಿ ಬರುವುದಿಲ್ಲ.

ವ್ಯಾಪಾರಿಯಿಂದ ಅಥವಾ ಕಂಪನಿಗಳಿಂದ ವಸ್ತು ಅಥವಾ ಸೇವೆಗಳನ್ನು ಖರೀದಿ ಮಾಡುವವನಿಗೆ ಖರೀದಿದಾರ / ಗ್ರಾಹಕ / ಕಸ್ಟಮರ್ ಎನ್ನುತ್ತಾರೆ.

ವ್ಯಾಪಾರದ ಗುರಿ ಏನು?

ಗ್ರಾಹಕರಿಗೆ ಬೇಕಾದ ವಸ್ತುಗಳು ಮತ್ತು ಸೇವೆ ನೀಡುವದೇ ವ್ಯಾಪಾರದ ಮುಖ್ಯ ಗುರಿ.

ಒಬ್ಬ ವ್ಯಾಪಾರಿಯ ಗುರಿ ಎಂದೂ ಮೋಸ ಮಾಡುವುದಲ್ಲ. ಅದಕ್ಕೆ ಬದಲಾಗಿ ಸೇವೆ ನೀಡುವುದು. 

ಒಬ್ಬ ತರಕಾರಿ ಮಾರುವವ ತರಕಾರಿಗಳನ್ನು ಸಂಗ್ರಹಿಸಿ ಮಾರುತ್ತಾನೆ. ಬೆಳಿಗ್ಗೆ ಅರೆ ಮುಂಜಾನೆಗೆ ನಿದ್ದೆಗೆಟ್ಟು ದೂರದ ಸಂತೆಗೆ ಹೋಗಿ ತರಕಾರಿ ತರುತ್ತಾನೆ ಇಲ್ಲಾಂದ್ರೆ ಬರುವ ಗಾಡಿಗಳಿಂದ ತರಕಾರಿ ಇಳಿಸಿಕೊಂಡು ನೀಟಾಗಿ ಜೋಡಿಸಿ ಗ್ರಾಹಕರಿಗೆ ಕಾದಿರುತ್ತಾನೆ. ತರಕಾರಿ ಕೆಟ್ಟರೆ ಆ ನಷ್ಟ ತನ್ನ ಮೇಲೆ ತೆಗೆದುಕೊಳ್ಳುತ್ತಾನೆ.

ಈ ಎಲ್ಲ ಶ್ರಮಕ್ಕೆ ಪ್ರತಿಫಲವಾಗಿ ಲಾಭ ನಿರೀಕ್ಷಿಸುತ್ತಾನೆ.

ಅವನಿರುವದರಿಂದ ಗ್ರಾಹಕನಿಗೂ ಮನೆಯಲ್ಲಿ ಎಲ್ಲಾ ತರಕಾರಿ ರಾಶಿ ಹಾಕಿಕೊಂಡು ಕೂರುವ ಅಗತ್ಯ ಇಲ್ಲ. ಎಷ್ಟು ಬೇಕೋ ಅಷ್ಟೇ ತರಕಾರಿ-ಹಣ್ಣು ಖರೀದಿ ಮಾಡಿದರಾಯ್ತು. ಇದರಿಂದ ಮನೆಯಲ್ಲಿ ಅನವಶ್ಯಕವಾಗಿ ತರಕಾರಿ ಕೊಳೆತು ಹೋಗುವದು ತಪ್ಪುತ್ತದೆ.

ಇದು ಒಂದು ರೀತಿಯಲ್ಲಿ ಗ್ರಾಹಕರಿಗೂ ತರಕಾರಿ ವ್ಯಾಪಾರಿಗೂ ವಿನ್ ವಿನ್ ಸಂದರ್ಭ. 

ಒಂದು ಕಾರ್ ಸರ್ವಿಸ್ ಮಾಡುವ ಕಂಪನಿ ಅದಕ್ಕೆ ಬೇಕಾದ ಉಪಕರಣ, ಯಂತ್ರ ಹಾಗೂ ನುರಿತ ಜನ ಒಟ್ಟುಗೂಡಿಸಿ ರಿಪೇರಿ ಸೇವೆಯನ್ನು ನೀಡುತ್ತದೆ. ಅದಕ್ಕೆ ಪರ್ಯಾಯವಾಗಿ ಲೆಕ್ಕ ಮಾಡಿ ಶುಲ್ಕ ವಸೂಲಿ ಮಾಡುತ್ತದೆ. ಈ ಒಂದು ಬಂಡವಾಳ ಹೂಡಿಕೆಗೆ ಹಾಗೂ ತೆಗೆದುಕೊಂಡ ರಿಸ್ಕಗೆ ಅದರ ಮಾಲೀಕ ಲಾಭವನ್ನು ಅಪೇಕ್ಷಿಸುತ್ತಾರೆ. ಅದು ಸಹಜ.

ವ್ಯಾಪಾರದಲ್ಲಿ ಲಾಭ ಮಾಡುವದು ತಪ್ಪೇ?

ಅನೇಕ ಜನ ಲಾಭ ಮಾಡುವದು, ಹಣ ಮಾಡುವದು ತಪ್ಪು ಅನ್ನುವ ಮನೋಭಾವ ಹೊಂದಿರುತ್ತಾರೆ. ಇದು ತಪ್ಪು. ಪ್ರಾಮಾಣಿಕವಾಗಿ ಶ್ರಮಪಟ್ಟು ದುಡಿದು ಖರೀದಿದಾರನಿಗೆ ವ್ಯಾಲ್ಯೂ ನೀಡುತ್ತಿರುವಾಗ ಲಾಭ ಮಾಡುವದರಲ್ಲಿ ತಪ್ಪೇ ಇಲ್ಲ.

ಇಂದು ಹೆಚ್ಚಿನ ಜನರಿಗೆ ಕೆಲಸ ನೀಡಿ ಸಂಬಳ ನೀಡುತ್ತಿರುವದು ವ್ಯಾಪಾರಿಗಳು ಮತ್ತು ಖಾಸಗಿ ಕಂಪನಿಗಳು. ಬ್ಯುಸಿನೆಸ್ ಈ ದೇಶದ ಹಣ ವ್ಯವಸ್ಥೆಯ ಬೆನ್ನುಲುಬು ಎಂದರೆ ತಪ್ಪಲ್ಲ.

ಆದರೆ ಒಂದು ವಸ್ತುವಿನ ನಿಜ ಬೆಲೆಗಿಂತ ಜಾಸ್ತಿ ಹಣ ತೆಗೆದುಕೊಳ್ಳುವದು, ಅಥವಾ ಕೊಡುವಾಗ ಪ್ರಮಾಣದಲ್ಲಿ ಮೋಸ ಮಾಡುವದು ತಪ್ಪು.

ಕೊನೆಯ ಮಾತು

ವ್ಯಾಪಾರಿ ಗುಟ್ಟನ್ನು ಅರಿತಾಗ ಎಲ್ಲವೂ ಅರ್ಥವಾಗುತ್ತದೆ. ಇದು ಕೆಲವರಿಗೆ ವಂಶಪಾರಂಪರ್ಯವಾಗಿ ಬಂದರೆ ಕೆಲವರು ಕಷ್ಟಪಟ್ಟು ಇದನ್ನು ಕಲಿಯುತ್ತಾರೆ. ಕೆಲವರು ವ್ಯಾಪಾರದಲ್ಲಿ ತೊಡಗಿ ನಷ್ಟ ಅನುಭವಿಸುತ್ತಾರೆ. ವ್ಯಾಪಾರಿ ಗುಟ್ಟನ್ನು ಅರಿಯಲು ಯಾವುದೇ ಶಿಕ್ಷಣದ ಅಗತ್ಯವಿಲ್ಲ. ಸ್ವಲ್ಪ ಕಾಮನ್ ಸೆನ್ಸ್, ಕಲಿಯಲು ಆಸಕ್ತಿ ಹಾಗೂ ಏನನ್ನಾದರೂ ಸಾಧಿಸಲು ಛಲ ಇದ್ದರೆ ಸಾಕು.

ನಿಮ್ಮದು ಯಾವುದೇ ರೀತಿಯ ಅಂಗಡಿ, ವಹಿವಾಟು, ಸೇವೆ ಇದ್ದರೆ, ವಾಣಿಜ್ಯ ವಿದ್ಯಾರ್ಥಿಗಳು ಆಗಿದ್ದರೆ, ರೈತರು ಆಗಿದ್ದರೆ ಈ ಲೇಖನ ಸರಣಿ ಉಪಯುಕ್ತ ಮಾಹಿತಿ ನೀಡಬಹುದು ಎಂಬುದು ನನ್ನ ಅನಿಸಿಕೆ. ದಯವಿಟ್ಟು ನಿಮ್ಮ ಅನಿಸಿಕೆ ನೀಡಿ.

ಚಿತ್ರ ಕೃಪೆ: ಬಿಂಗ್ ಇಮೇಜ್ ಜನರೇಟರ್

ಈ ಲೇಖನ ಮೊದಲು ವಿಸ್ಮಯ ಪತ್ರಿಕಾ ತಾಣದಲ್ಲಿ 8 ಸಪ್ಟೆಂಬರ್ 2019 ರಂದು ರಾಜೇಶ ಹೆಗಡೆ ಅವರಿಂದ ಪ್ರಕಟ ಆಗಿತ್ತು. ಆದರೆ ಈಗ ಹೊಸ ವಿಷಯ, ಚಿತ್ರ ಸೇರಿಸಿ ರಾಜೇಶ ಹೆಗಡೆಯಿಂದ ಅಪಡೇಟ್ ಮಾಡಲಾಗಿದೆ.

ತಪ್ಪದೇ ಓದಿ...

ವಿದೇಶ,ಬೆಂಗಳೂರು
©ಎಲ್ಲಾ ಹಕ್ಕುಗಳನ್ನು ಕಾದಿರಿಸಲಾಗಿದೆ. ಅನುಮತಿ ಇಲ್ಲದೇ ಲೇಖನಗಳನ್ನು ನಕಲು ಮಾಡುವಂತಿಲ್ಲ.
ಇದು ಮಸ್ತಕಮಣಿ.ಕಾಂ ಕೊಡುಗೆ