Slider

ವ್ಯಾಪಾರ ಎಂದರೇನು?

ವ್ಯಾಪಾರ ಎಂದರೇನು? ಹಣ ಹೇಗೆ ಹುಟ್ಟಿತು? ವ್ಯಾಪಾರಿ ಹಾಗೂ ಆತನ ಗುರಿ ಏನು? ವ್ಯಾಪಾರದಲ್ಲಿ ಹಣ ಮಾಡೋದು ತಪ್ಪಾ? ಈ ಕುತೂಹಲಕರ ಪ್ರಶ್ನೆಗೆ ಉತ್ತರ ಈ ಲೇಖನ ನೀಡಲಿದೆ. ತಿಳಿಯಲು ಮುಂದೆ ಓದಿ?

ಇಂದಿನ ಕಾಲದಲ್ಲಿ ಬ್ಯುಸಿನೆಸ್ ಸ್ಕಿಲ್ ಅರ್ಥಾತ್ ವ್ಯಾಪಾರಿ ತಂತ್ರ ಎಲ್ಲರಿಗೂ ತುಂಬಾ ಮುಖ್ಯ.

ಒಬ್ಬ ಕಂಪನಿ ಅಥವಾ ಅಂಗಡಿ ನಡೆಸುವವರಿಗಂತೂ ವ್ಯಾಪಾರಿ ಜಾಣ್ಮೆ ಇಲ್ಲದಿದ್ದರೆ ನಷ್ಟವಾಗಿ ಮುಚ್ಚುವದು ಖಚಿತ.

ಆದರೆ ನೀವು ಒಬ್ಬ ಸಾಫ್ಟವೇರ್ ಇಂಜಿನಿಯರ್ ಆಗಿರಲಿ, ರೈತರೇ ಆಗಿರಲಿ, ಬ್ಯಾಂಕ್ ಮ್ಯಾನೆಜರ್ ಕೂಡಾ ಆಗಿರಲಿ. ಸ್ವಲ್ಪ ವ್ಯಾಪಾರಿ ಜಾಣ್ಮೆ ಇದ್ದರೆ ನೀವು ಯಶಸ್ಸು ಗಳಿಸುವ ಸಾಧ್ಯತೆ ಜಾಸ್ತಿ ಆಗುತ್ತೆ.

ಇದಕ್ಕೆ ಯಾವುದೇ ಡಿಗ್ರೀ ಬೇಕಿಲ್ಲ. ಸ್ವಲ್ಪ ಕಾಮನ್ ಸೆನ್ಸ್, ಕಲಿಯುವ ಹಂಬಲ ಇದ್ರೆ ಸಾಕು.

ಬನ್ನಿ ಈ ಪುಟದಲ್ಲಿ ವ್ಯಾಪಾರದ ಬಗ್ಗೆ ತಿಳಿಯೋಣ.

ವ್ಯಾಪಾರ ಎಂದರೆ?

 ವ್ಯಾಪಾರ ಎಂದರೆ ಖರೀದಿಸುವುದು ಮತ್ತೆ ಮಾರಾಟಮಾಡುವುದು. ಅರ್ಥಾತ್ ಕ್ರಯ (ಖರೀದಿ) ಹಾಗೂ ವಿಕ್ರಯ(ಮಾರಾಟ). ಇದೊಂದು ರೀತಿಯಲ್ಲಿ ತನ್ನ ಬಳಿ ಅಪಾರ ವಾಗಿರುವುದನ್ನು ವ್ಯಯಿಸುವುದು ಅದಕ್ಕೆ ಪ್ರತಿಫಲ ನಿರೀಕ್ಷಿಸುವದು.

ಅದು ವಸ್ತು ಇರಬಹುದು ಅಥವಾ ಕೇವಲ ಸೇವೆ ಕೂಡಾ ಆಗಿರಬಹುದು. ಒಟ್ಟಿನಲ್ಲಿ ಅದರ ಅಗತ್ಯ ಗ್ರಾಹಕರು ಅರ್ಥಾತ್ ಕಸ್ಟಮರ್ ಗೆ ಇರಬೇಕು ಅಷ್ಟೇ.

ಹಣ ಎಂದರೇನು?

ಇಂದಿನ ಕಾಲದಲ್ಲಿ ಮಾರಿದ ವಸ್ತು ಅಥವಾ ಮಾಡಿದ ಕೆಲಸಕ್ಕೆ ಪ್ರತಿಫಲ ಎಂದರೆ ದುಡ್ಡು/ ಹಣ / ಮನಿ.

ಸಾವಿರಾರು ವರ್ಷಗಳ ಹಿಂದೆ ಈ ಹಣ ಎನ್ನೋದೇ ಇರಲಿಲ್ಲ. ಆಗ ಬರಿ ವಸ್ತುಗಳ ವಿನಿಮಯ ನಡೆಯುತ್ತಾ ಇತ್ತು.

ಆಗ ಅಕ್ಕಿ ಬೆಳೆದ ರೈತ ತಮ್ಮ ಕುಟುಂಬಕ್ಕೆ ಸಾಕಾಗುವಷ್ಟು ಅಕ್ಕಿ ಇಟ್ಟುಕೊಂಡು ಉಳಿದ ಅಕ್ಕಿಯನ್ನು ಬೇರೆಯವರೊಂದಿಗೆ ಗೋಧಿ, ಸಾಂಬಾರ ಪದಾರ್ಥ, ಹಣ್ಣು ಹೀಗೆ ಇತರ ವಸ್ತುಗಳಿಗಾಗಿ ವಿನಿಮಯ ಮಾಡಿಕೊಳ್ಳುತ್ತಿದ್ದನು. ಅದೇ ರೀತಿ ಕೆಲಸಗಾರರಿಗೆ ಕೂಡಾ ಸಂಬಳ ರೂಪದಲ್ಲಿ ವಸ್ತುಗಳನ್ನು ಕೊಡುವದು ವಾಡಿಕೆಯಲ್ಲಿ ಇತ್ತು.

ಕಾಲ ಕ್ರಮೇಣ ಹೀಗೆ ವಿನಿಮಯ ಮಾಡಿ ಪಡೆದ ವಸ್ತುಗಳು ಮಿಕ್ಕಿದಾಗ ತುಂಬಾ ದಿನ ಇಟ್ಟು ಕೊಳ್ಳುವದು ಕಷ್ಟ ಎಂದು ಜನಕ್ಕೆ ಅರಿವಾಯ್ತು. ಕ್ರಮೇಣ ಹಾಳೆಯ ಮೇಲೆ ಲೆಕ್ಕಾಚಾರ ಬರೆದಿಡುವದು, ಕಂಚಿನ ನಾಣ್ಯ ರೂಪದಲ್ಲಿ ನೀಡುವದು ಹೀಗೆ ರೂಢಿ ಮಾಡಿ ಕೊಂಡರು.

ಅದಕ್ಕಾಗೇ ಈ ಹಣ ಎಂಬುದು ವಾಡಿಕೆಗೆ ಬಂತು. ರಾಜರು ಚಿನ್ನ, ಬೆಳ್ಳಿ, ಕಂಚು, ತಾಮ್ರ ಮೊದಲಾದ ಲೋಹಗಳಿಂದ ನಾಣ್ಯ ಮಾಡಿ ಹಂಚುತ್ತಿದ್ದರು. ಅದನ್ನೇ ಹಣದ ರೂಪದಲ್ಲಿ ಜನ ಬಳಸುತ್ತಿದ್ದರು. ಇತ್ತೀಚೆಗೆ ಕಾಗದದ ನೋಟುಗಳು, ಡಿಜಿಟಲ್ ಕರೆನ್ಸಿ ಕೂಡಾ ಬಂದಿವೆ.

ಒಬ್ಬ ವ್ಯಕ್ತಿಗೆ ಹಣ ಪ್ರಾಮಾಣಿಕವಾಗಿ ದೊರೆಯುವದು ಯಾವುದಾದರೂ ವಸ್ತು ಅಥವಾ ಸೇವೆಯನ್ನು ನೀಡಿದಾಗ ಮಾತ್ರ. ಇಲ್ಲಾಂದ್ರೆ ಯಾರಾದ್ರು ನಿಮಗೆ ಗಿಫ್ಟ್ ಅಥವಾ ದಾನ ರೂಪದಲ್ಲಿ ನೀಡಬೇಕು.

ವ್ಯಾಪಾರಿ ಯಾರು?

ಜೀವನೋಪಾಯಕ್ಕೆ ವ್ಯಾಪಾರ ಮಾಡುವವನನ್ನು ವ್ಯಾಪಾರಿ ಎನ್ನುತ್ತಾರೆ. ಇಂದು ವ್ಯಾಪಾರ ಮಾಡುವ ಅನುಭವ ಎಲ್ಲರಿಗೂ ಅವಶ್ಯಕ. ಆ ಜಾಣತನ ಇರುವವರೇ ಮಾರುಕಟ್ಟೆಯಲ್ಲಿ ಗೆಲ್ಲುತ್ತಾರೆ. ಒಬ್ಬ ರೈತ ಕೂಡ ವ್ಯಾಪಾರಿ ಚಾಕಚಕ್ಯತೆ ಇದ್ದರೆ ಉತ್ತಮ ಲಾಭ ಪಡೆಯಬಲ್ಲ. ಒಬ್ಬ ನೌಕರ ಕೂಡಾ ವ್ಯಾಪಾರಿ ತಂತ್ರಗಳನ್ನು ತನ್ನ ಕೆಲಸದಲ್ಲಿ ಬಳಸಿ ಇತರರನ್ನು ಹಿಂದೆ ಹಾಕಬಹುದು.

ಒಬ್ಬ ವ್ಯಾಪಾರಿ ತನ್ನ ಸಂಪೂರ್ಣ ಜೀವನ ನಿರ್ವಹಣೆಗೆ ವ್ಯಾಪಾರದಲ್ಲಿ ಬರುವ ಲಾಭದ ಮೇಲೆ ಅವಲಂಬಿಸಿರುತ್ತಾನೆ. ವ್ಯಾಪಾರದಲ್ಲಿ ಆಗುವ ಖರ್ಚು ಕಳೆದು ಅದರಲ್ಲಿ ಲಾಭಗಳಿಸುವುದು ತುಂಬಾ ಮುಖ್ಯ.

ಲಾಭ-ನಷ್ಟ ಇವೆರಡು ವ್ಯಾಪಾರದಲ್ಲಿ ಸಾಮಾನ್ಯ. ಬುದ್ಧಿವಂತಿಕೆ ಇದ್ದರೆ ಇದ್ದರೆ ಒಬ್ಬ ವ್ಯಾಪಾರಿ ತನ್ನ ಬಿಸಿನೆಸ್ಸ್ ಅನ್ನು ಲಾಭದ ಕಡೆಗೆ ಒಯ್ಯ ಬಲ್ಲ. ಆದರೆ ವ್ಯಾಪಾರ ಅನ್ನೋದು ಎಲ್ಲರಿಗೂ ಕೈಗೂಡಿ ಬರುವುದಿಲ್ಲ.

ವ್ಯಾಪಾರಿಯಿಂದ ಅಥವಾ ಕಂಪನಿಗಳಿಂದ ವಸ್ತು ಅಥವಾ ಸೇವೆಗಳನ್ನು ಖರೀದಿ ಮಾಡುವವನಿಗೆ ಖರೀದಿದಾರ / ಗ್ರಾಹಕ / ಕಸ್ಟಮರ್ ಎನ್ನುತ್ತಾರೆ.

ವ್ಯಾಪಾರದ ಗುರಿ ಏನು?

ಗ್ರಾಹಕರಿಗೆ ಬೇಕಾದ ವಸ್ತುಗಳು ಮತ್ತು ಸೇವೆ ನೀಡುವದೇ ವ್ಯಾಪಾರದ ಮುಖ್ಯ ಗುರಿ.

ಒಬ್ಬ ವ್ಯಾಪಾರಿಯ ಗುರಿ ಎಂದೂ ಮೋಸ ಮಾಡುವುದಲ್ಲ. ಅದಕ್ಕೆ ಬದಲಾಗಿ ಸೇವೆ ನೀಡುವುದು. 

ಒಬ್ಬ ತರಕಾರಿ ಮಾರುವವ ತರಕಾರಿಗಳನ್ನು ಸಂಗ್ರಹಿಸಿ ಮಾರುತ್ತಾನೆ. ಬೆಳಿಗ್ಗೆ ಅರೆ ಮುಂಜಾನೆಗೆ ನಿದ್ದೆಗೆಟ್ಟು ದೂರದ ಸಂತೆಗೆ ಹೋಗಿ ತರಕಾರಿ ತರುತ್ತಾನೆ ಇಲ್ಲಾಂದ್ರೆ ಬರುವ ಗಾಡಿಗಳಿಂದ ತರಕಾರಿ ಇಳಿಸಿಕೊಂಡು ನೀಟಾಗಿ ಜೋಡಿಸಿ ಗ್ರಾಹಕರಿಗೆ ಕಾದಿರುತ್ತಾನೆ. ತರಕಾರಿ ಕೆಟ್ಟರೆ ಆ ನಷ್ಟ ತನ್ನ ಮೇಲೆ ತೆಗೆದುಕೊಳ್ಳುತ್ತಾನೆ.

ಈ ಎಲ್ಲ ಶ್ರಮಕ್ಕೆ ಪ್ರತಿಫಲವಾಗಿ ಲಾಭ ನಿರೀಕ್ಷಿಸುತ್ತಾನೆ.

ಅವನಿರುವದರಿಂದ ಗ್ರಾಹಕನಿಗೂ ಮನೆಯಲ್ಲಿ ಎಲ್ಲಾ ತರಕಾರಿ ರಾಶಿ ಹಾಕಿಕೊಂಡು ಕೂರುವ ಅಗತ್ಯ ಇಲ್ಲ. ಎಷ್ಟು ಬೇಕೋ ಅಷ್ಟೇ ತರಕಾರಿ-ಹಣ್ಣು ಖರೀದಿ ಮಾಡಿದರಾಯ್ತು. ಇದರಿಂದ ಮನೆಯಲ್ಲಿ ಅನವಶ್ಯಕವಾಗಿ ತರಕಾರಿ ಕೊಳೆತು ಹೋಗುವದು ತಪ್ಪುತ್ತದೆ.

ಇದು ಒಂದು ರೀತಿಯಲ್ಲಿ ಗ್ರಾಹಕರಿಗೂ ತರಕಾರಿ ವ್ಯಾಪಾರಿಗೂ ವಿನ್ ವಿನ್ ಸಂದರ್ಭ. 

ಒಂದು ಕಾರ್ ಸರ್ವಿಸ್ ಮಾಡುವ ಕಂಪನಿ ಅದಕ್ಕೆ ಬೇಕಾದ ಉಪಕರಣ, ಯಂತ್ರ ಹಾಗೂ ನುರಿತ ಜನ ಒಟ್ಟುಗೂಡಿಸಿ ರಿಪೇರಿ ಸೇವೆಯನ್ನು ನೀಡುತ್ತದೆ. ಅದಕ್ಕೆ ಪರ್ಯಾಯವಾಗಿ ಲೆಕ್ಕ ಮಾಡಿ ಶುಲ್ಕ ವಸೂಲಿ ಮಾಡುತ್ತದೆ. ಈ ಒಂದು ಬಂಡವಾಳ ಹೂಡಿಕೆಗೆ ಹಾಗೂ ತೆಗೆದುಕೊಂಡ ರಿಸ್ಕಗೆ ಅದರ ಮಾಲೀಕ ಲಾಭವನ್ನು ಅಪೇಕ್ಷಿಸುತ್ತಾರೆ. ಅದು ಸಹಜ.

ವ್ಯಾಪಾರದಲ್ಲಿ ಲಾಭ ಮಾಡುವದು ತಪ್ಪೇ?

ಅನೇಕ ಜನ ಲಾಭ ಮಾಡುವದು, ಹಣ ಮಾಡುವದು ತಪ್ಪು ಅನ್ನುವ ಮನೋಭಾವ ಹೊಂದಿರುತ್ತಾರೆ. ಇದು ತಪ್ಪು. ಪ್ರಾಮಾಣಿಕವಾಗಿ ಶ್ರಮಪಟ್ಟು ದುಡಿದು ಖರೀದಿದಾರನಿಗೆ ವ್ಯಾಲ್ಯೂ ನೀಡುತ್ತಿರುವಾಗ ಲಾಭ ಮಾಡುವದರಲ್ಲಿ ತಪ್ಪೇ ಇಲ್ಲ.

ಇಂದು ಹೆಚ್ಚಿನ ಜನರಿಗೆ ಕೆಲಸ ನೀಡಿ ಸಂಬಳ ನೀಡುತ್ತಿರುವದು ವ್ಯಾಪಾರಿಗಳು ಮತ್ತು ಖಾಸಗಿ ಕಂಪನಿಗಳು. ಬ್ಯುಸಿನೆಸ್ ಈ ದೇಶದ ಹಣ ವ್ಯವಸ್ಥೆಯ ಬೆನ್ನುಲುಬು ಎಂದರೆ ತಪ್ಪಲ್ಲ.

ಆದರೆ ಒಂದು ವಸ್ತುವಿನ ನಿಜ ಬೆಲೆಗಿಂತ ಜಾಸ್ತಿ ಹಣ ತೆಗೆದುಕೊಳ್ಳುವದು, ಅಥವಾ ಕೊಡುವಾಗ ಪ್ರಮಾಣದಲ್ಲಿ ಮೋಸ ಮಾಡುವದು ತಪ್ಪು.

ಕೊನೆಯ ಮಾತು

ವ್ಯಾಪಾರಿ ಗುಟ್ಟನ್ನು ಅರಿತಾಗ ಎಲ್ಲವೂ ಅರ್ಥವಾಗುತ್ತದೆ. ಇದು ಕೆಲವರಿಗೆ ವಂಶಪಾರಂಪರ್ಯವಾಗಿ ಬಂದರೆ ಕೆಲವರು ಕಷ್ಟಪಟ್ಟು ಇದನ್ನು ಕಲಿಯುತ್ತಾರೆ. ಕೆಲವರು ವ್ಯಾಪಾರದಲ್ಲಿ ತೊಡಗಿ ನಷ್ಟ ಅನುಭವಿಸುತ್ತಾರೆ. ವ್ಯಾಪಾರಿ ಗುಟ್ಟನ್ನು ಅರಿಯಲು ಯಾವುದೇ ಶಿಕ್ಷಣದ ಅಗತ್ಯವಿಲ್ಲ. ಸ್ವಲ್ಪ ಕಾಮನ್ ಸೆನ್ಸ್, ಕಲಿಯಲು ಆಸಕ್ತಿ ಹಾಗೂ ಏನನ್ನಾದರೂ ಸಾಧಿಸಲು ಛಲ ಇದ್ದರೆ ಸಾಕು.

ನಿಮ್ಮದು ಯಾವುದೇ ರೀತಿಯ ಅಂಗಡಿ, ವಹಿವಾಟು, ಸೇವೆ ಇದ್ದರೆ, ವಾಣಿಜ್ಯ ವಿದ್ಯಾರ್ಥಿಗಳು ಆಗಿದ್ದರೆ, ರೈತರು ಆಗಿದ್ದರೆ ಈ ಲೇಖನ ಸರಣಿ ಉಪಯುಕ್ತ ಮಾಹಿತಿ ನೀಡಬಹುದು ಎಂಬುದು ನನ್ನ ಅನಿಸಿಕೆ. ದಯವಿಟ್ಟು ನಿಮ್ಮ ಅನಿಸಿಕೆ ನೀಡಿ.

ಚಿತ್ರ ಕೃಪೆ: ಬಿಂಗ್ ಇಮೇಜ್ ಜನರೇಟರ್

ಈ ಲೇಖನ ಮೊದಲು ವಿಸ್ಮಯ ಪತ್ರಿಕಾ ತಾಣದಲ್ಲಿ 8 ಸಪ್ಟೆಂಬರ್ 2019 ರಂದು ರಾಜೇಶ ಹೆಗಡೆ ಅವರಿಂದ ಪ್ರಕಟ ಆಗಿತ್ತು. ಆದರೆ ಈಗ ಹೊಸ ವಿಷಯ, ಚಿತ್ರ ಸೇರಿಸಿ ರಾಜೇಶ ಹೆಗಡೆಯಿಂದ ಅಪಡೇಟ್ ಮಾಡಲಾಗಿದೆ.

0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

blogger

ತಪ್ಪದೇ ಓದಿ...

ವಿದೇಶ,ಬೆಂಗಳೂರು
©ಎಲ್ಲಾ ಹಕ್ಕುಗಳನ್ನು ಕಾದಿರಿಸಲಾಗಿದೆ. ಅನುಮತಿ ಇಲ್ಲದೇ ಲೇಖನಗಳನ್ನು ನಕಲು ಮಾಡುವಂತಿಲ್ಲ.
ಇದು ಮಸ್ತಕಮಣಿ.ಕಾಂ ಕೊಡುಗೆ