Slider

ವ್ಯಾಪಾರದಲ್ಲಿ ಗುಣಮಟ್ಟ ಇಲ್ಲದಿದ್ದರೆ ಉಳಿಗಾಲವಿಲ್ಲ

ಕೆಲವು ಅಂಗಡಿಗಳು, ಕಂಪನಿಗಳು ಚೆನ್ನಾಗಿ ನಡೆಯುತ್ತವೆ. ಇನ್ನೂ ಕೆಲವು ಚೆನ್ನಾಗಿ ನಡೆಯಲ್ಲ. ಇದಕ್ಕೆ ಒಂದು ಮುಖ್ಯ ಕಾರಣ. ಗುಣಮಟ್ಟ. ಹೇಗೆ ಗುಣಮಟ್ಟ ಉತ್ತಮ ಪಡಿಸಿಕೊಳ್ಳಬಹುದು? ಈ ಲೇಖನ ಓದಿ.

ಒಬ್ಬ ವ್ಯಾಪಾರಿ ಮಾರುವ ವಸ್ತುಗಳಲ್ಲಿ ಅಥವಾ ಸೇವೆಯಲ್ಲಿ ಗುಣಮಟ್ಟ ಇರಬೇಕಾದ್ದು ಅತಿ ಮುಖ್ಯ. ಒಂದು ಕಂಪನಿ ಕೂಡ ಉತ್ತಮ ಗುಣಮಟ್ಟದ ವಸ್ತುಗಳನ್ನು ತಯಾರಿಸಿದರೆ ಜನ ಹೆಚ್ಚು ಖರೀದಿಸುತ್ತಾರೆ. ಇಲ್ಲದಿದ್ದರೆ ಒಮ್ಮೆ ಖರೀದಿಸಿ ಬೇಸರವಾದ ಗ್ರಾಹಕ ಮತ್ತೆ ಆ ಅಂಗಡಿ ಕಡೆ ಸುಳಿಯುವುದಿಲ್ಲ. ಗುಣಮಟ್ಟದ ವ್ಯಾಖ್ಯಾನ ಕಾಲ ಕಾಲಕ್ಕೆ ಜನರಿಂದ ಜನರಿಗೆ ಬದಲಾಗುತ್ತಿರುತ್ತದೆ.

ಒಬ್ಬ ರೈತ ಕೂಡ ಉತ್ತಮ ಜಾತಿಯ ಬೀಜಗಳನ್ನು ಬಳಸಿ ರಾಸಾಯನಿಕ ವಿಷ ಬಳಸದೆ ಸಾವಯವ ರೀತಿಯಲ್ಲಿ ಬೆಳೆ ಬೆಳೆದರೆ ಅದಕ್ಕೆ ಬೆಲೆ ಜಾಸ್ತಿ. ನೆನಪಿಡಿ ಎಲ್ಲರೂ ಒಂದೇ ರೀತಿಯ ಗುಣಮಟ್ಟ ಅಪೇಕ್ಷಿಸುವುದಿಲ್ಲ. ಕೆಲವರು ಕಡಿಮೆ ಬೆಲೆಯಲ್ಲಿ ಸಾಧಾರಣ ಗುಣಮಟ್ಟ ಬಯಸಿದರೆ ಮಧ್ಯಮ ಬೆಲೆಯಲ್ಲಿ ಮಧ್ಯಮ ಗುಣಮಟ್ಟ ಹಾಗೂ ಆರ್ಥಿಕವಾಗಿ ಮುಂದುವರಿದವರು ಪ್ರೀಮಿಯಂ ಅಂದರೆ ಅತ್ಯುತ್ತಮ ಗುಣಮಟ್ಟ ಬಯಸುತ್ತಾರೆ. ಅದಕ್ಕಾಗಿ ಹೆಚ್ಚಿನ ಬೆಲೆ ಕೊಡಲು ಸಿದ್ಧರಿರುತ್ತಾರೆ.

ಒಂದು ಸಿನಿಮಾ, ಟಿವಿ ಕೂಡ ಗುಣಮಟ್ಟದ ಆಧಾರದ ಮೇಲೆ ಜನ ನೋಡುತ್ತಾರೆ.

ಅದಕ್ಕೆ ಎಲ್ಲ ಕಂಪನಿಗಳು ಬಜೆಟ್ ಮಧ್ಯಮ ಹಾಗೂ ಪ್ರೀಮಿಯಂ ರೇಂಜಿನಲ್ಲಿ ಬೇರೆ ಬೇರೆ ವಸ್ತುಗಳನ್ನು ತಯಾರಿಸುತ್ತಾರೆ. ಯಾರು ಪ್ರೀಮಿಯಂ ಗ್ರಾಹಕರಿಗೆ ವಸ್ತು ತಯಾರಿಸಿ ಅವರ ಮನ ಗೆಲ್ಲುತ್ತಾರೋ ಅವರು ಜಾಸ್ತಿ ಲಾಭಗಳಿಸಬಹುದು.

ಒಂದು ವಸ್ತು ಹಾಗೂ ಸೇವೆಯ ಗುಣಮಟ್ಟ ಹೇಗೆ ನಿರ್ಧಾರವಾಗುತ್ತದೆ. ಈ ಮುಂದಿನ ಅಂಶಗಳು ವಸ್ತು ಅಥವಾ ಸೇವೆಯ ಗುಣಮಟ್ಟ ಹಾಗೂ ಉತ್ತಮ ಅನುಭವಕ್ಕೆ ಕಾರಣ.

ಹೊಸತಾದ ತಾಜಾ ವಸ್ತುಗಳು

ವಸ್ತು ಹೊಸದಾಗಿ ಇದ್ದರೆ ಗುಣಮಟ್ಟ ಒಳ್ಳೆಯದು. ಉದಾಹರಣೆಗೆ ತರಕಾರಿ, ಹಣ್ಣು, ಹಾಲು ಮೊಸರು ಇತ್ಯಾದಿ ಈಗ ತಾನೆ ಉತ್ಪಾದಿಸಿದರೆ ಅದು ಉತ್ತಮ. ಸಮಯ ಕಳೆದಂತೆ ಗುಣಮಟ್ಟ ಕಡಿಮೆ ಆಗುತ್ತದೆ. ಆದರೆ ಕೆಲವು ವಸ್ತುಗಳು ಹಳತಾದಂತೆ ಗುಣಮಟ್ಟ ಹೆಚ್ಚುತ್ತದೆ. ಉದಾಹರಣೆಗೆ ಅಕ್ಕಿ ಹೊಸತಿಗಿಂತ ಒಂದು ಎರಡು ವರ್ಷ ಹಳೆಯದು ಆದರೆ ಅದಕ್ಕಿಂತ ಉತ್ತಮ. ಹಾಗೆಯೇ ಮದ್ಯಪೇಯ ಹಳತಾದಷ್ಟು ಬೆಲೆ ಗುಣಮಟ್ಟ ಜಾಸ್ತಿ.

ಸಾಧ್ಯವಾದಷ್ಟು ಹೊಸ ವಸ್ತುಗಳು ತನ್ನ ಅಂಗಡಿಯಲ್ಲಿ ಇರುವಂತೆ ನೋಡಿಕೊಳ್ಳಬೇಕು. ಎಷ್ಟು ಖರ್ಚಾಗುತ್ತೆ ಅಷ್ಟೇ ಮಾಡಬೇಕು. ಒಂದೆರಡು ಜನಕ್ಕೆ ಖಾಲಿಯಾಗಿದೆ ಎಂದರೂ ಪರವಾಗಿಲ್ಲ, ಹೆಚ್ಚಿನ ದಿನ ವ್ಯಾಪಾರ ವಾಗುವಷ್ಟೇ ವಸ್ತುಗಳ ತರಿಸುವುದು ಉತ್ತಮ. ಕಂಪನಿಗಳು ಸಹ ಎಷ್ಟು ಖರ್ಚಾಗುತ್ತೋ ಅಷ್ಟೇ ಉತ್ಪಾದಿಸಬೇಕು. ರೈತರೂ ಕೂಡ ತಾಜಾ ತರಕಾರಿ, ಹಣ್ಣು ಕಿತ್ತು ಮಾರಿದರೆ ಒಳ್ಳೆಯದು.

ಹುಳುಕಿಲ್ಲದ, ಒಡೆಯದ ವಸ್ತುಗಳು

ಮಾರುವ ವಸ್ತುಗಳು ಹುಳುಕಿಲ್ಲದಂತೆ ಒಡೆಯದ ಹಾಗೆ ವ್ಯಾಪಾರಿ ನೋಡಿಕೊಳ್ಳಬೇಕು.ಒಬ್ಬ ಕಿರಣಿ ಅಂಗಡಿಯಲ್ಲಿ ಅಕ್ಕಿ ಗೋಧಿ ಹಿಡಿಯದಂತೆ ನೋಡಿಕೊಳ್ಳಬೇಕು. ಇಲ್ಲಿ ಜಿರಳೆಗಳು ಬರದಂತೆ ಸಂಗ್ರಹಿಸಬೇಕು. ಆದರೆ ಇದಕ್ಕೆ ವಿಷಕಾರಿ ರಾಸಾಯನಿಕ ಬಳಸಬಾರದು. 

ವಸ್ತುಗಳನ್ನು ಸಾಗಿಸುವಾಗ ಗೋಡೌನ್ ನಿಂದ (ಸಂಗ್ರಹಗಾರ) ತರುವಾಗ ಬೀಳದಂತೆ ನೀರಿನಿಂದ ದೂಳಿನಿಂದ ಹಾಳಾಗದಂತೆ ನೋಡಿಕೊಳ್ಳಬೇಕು. ಒಬ್ಬ ರೈತ ಕೂಡ ತನ್ನ ಗದ್ದೆಯ ತೋಟಕ್ಕೆ ಹುಳ ಹಿಡಿಯದಂತೆ ಬೇವಿನ ಎಣ್ಣೆ ಮೊದಲಾದ ಸಾವಯವ ರೀತಿ ಬಳಸಬೇಕು. ಉತ್ತಮ ಹುಳುಕಿಲ್ಲದ ಡ್ಯಾಮೇಜ್ ಆಗದ ಕೊಟ್ಟರೆ ಗ್ರಾಹಕ ಮತ್ತೆ-ಮತ್ತೆ ಬರುತ್ತಾನೆ.

ಕೆಲವೊಮ್ಮೆ ಕಣ್ತಪ್ಪಿ ಗ್ರಾಹಕರಿಗೆ ಕೊಟ್ಟಿದ್ದರು ಅಥವಾ ಆತ ವಾಪಸ್ ದೂರಿನೊಂದಿಗೆ ಬಂದಾಗ ಪರಿಹಾರ ನೀಡುವುದು ಒಳ್ಳೆಯದು.

  • ಬದಲಿ ವಸ್ತು ನೀಡುವುದು.
  • ದರದಲ್ಲಿ ರಿಯಾಯಿತಿ ನೀಡುವುದು (ಬಳಸುವ ಹಾಗಿದ್ದರೆ).
  • ಹಣ ವಾಪಸ್ ನೀಡುವುದು.

ಹೆಚ್ಚಿನ ಕಂಪನಿಗಳು ನಿರ್ಮಾಣ ದೋಷದ ವಸ್ತುಗಳನ್ನು ವಾಪಸ್ ಪಡೆದುಕೊಳ್ಳುತ್ತವೆ. ಆದರೆ ನೆನಪಿಡಿ ಅಂಗಡಿಕಾರನೆ, ರೈತನೇ, ಕಂಪನಿ ವಸ್ತುವಿನ ಗುಣಮಟ್ಟ ಮೊದಲೇ ಪರಿಶೀಲಿಸಿ ಕೊಡದೇ ಇದ್ದರೆ ಇನ್ನೂ ಒಳ್ಳೆಯದು. ಅದು ಸಾಗಣೆ ಉಳಿತಾಯ ಮಾಡುತ್ತದೆ. ಯಾವುದೇ ಕಾರಣಕ್ಕೂ ಗ್ರಾಹಕರ ಬಳಿ ವಾದ ಮಾಡಿ ಮನಸ್ತಾಪ ಮಾಡಿಕೊಳ್ಳಬೇಡಿ. ಮುಂದೆ ಹಾಗಾಗದಂತೆ ಜಾಗರೂಕತೆ ವಹಿಸಿ.

ಸರಿಯಾದ ಗಾತ್ರ, ಆಕಾರ, ಪ್ರಮಾಣ, ಲೆಕ್ಕ

ಡ್ರೆಸ್ ಚಪ್ಪಲಿ ಇತ್ಯಾದಿ ವಸ್ತುಗಳಿಗೆ ಸರಿಯಾದ ಗಾತ್ರ ಅತಿ ಮುಖ್ಯ. ಅದಕ್ಕೆ ಟ್ರಯಲ್ ಮಾಡಿಯೇ ಖರೀದಿಸುವಂತಿದ್ದರೆ ಒಳ್ಳೆಯದು. ಹಾಗೆ ಸರಿಯಾದ ಪ್ರಮಾಣ ಹಾಗೂ ಲೆಕ್ಕ ಕೂಡ ಮುಖ್ಯ. ಯಾವುದೇ ಕಾರಣಕ್ಕೆ ಕೆಲಸಗಾರರು ಕಡಿಮೆ ಪ್ರಮಾಣ ಅಥವಾ ಲೆಕ್ಕ ಕೊಡದಂತೆ ಎಚ್ಚರದಿಂದಿರಿ. ಪ್ರಮಾಣದಲ್ಲಿ ಮೋಸ ಮಾಡಿದಾಗ ಅದು ಗ್ರಾಹಕರ ಬೇಸರಕ್ಕೆ ಕಾರಣವಾಗುತ್ತದೆ. ಎಚ್ಚರಿಕೆ ಕೊಟ್ಟರೂ ಆ ತರಹ ಮೋಸ ಮಾಡುವ ಕೆಲಸಗಾರರನ್ನು ಕಿತ್ತು ಹಾಕಿ.

ಇತ್ತೀಚಿನ ತಂತ್ರಜ್ಞಾನ

ಹಳೆಯ ತಂತ್ರಜ್ಞಾನ ಬಳಸಬೇಡಿ ಅಥವಾ ಹಳೆಯ ತಂತ್ರಜ್ಞಾನ ವಸ್ತುವನ್ನು ಮಾಡಬೇಡಿ. ಹೊಸ ತಂತ್ರಜ್ಞಾನದ ವಸ್ತುವನ್ನು ಮಾರಾಟ ಮಾಡಿರಿ.

ಸಮಯ

ಗ್ರಾಹಕ ಆರ್ಡರ್ ನೀಡಿದ ಮೇಲೆ ತಲುಪಿಸುವ ಸಮಯ ರಿಪೇರಿಗೆ ತೆಗೆದುಕೊಳ್ಳುವ ಸಮಯ ಕೂಡ ಮುಖ್ಯ. ತಡ ಮಾಡಿದಷ್ಟೂ ಗ್ರಾಹಕರಿಗೆ ಕಹಿ ಅನುಭವವಾಗುತ್ತದೆ. ಬೇಗ ಸೇವೆ ನೀಡಲು ಜನ ಜಾಸ್ತಿ ಬೇಕಿದ್ದರೆ, ಜಾಗ ಜಾಸ್ತಿ ಬೇಕಿದ್ದರೆ ಜನರನ್ನು ಕೆಲಸಕ್ಕೆ ತೆಗೆದುಕೊಳ್ಳಲು ಹಿಂದೆ ಮುಂದೆ ನೋಡಬೇಡಿ. ಎಲ್ಲವನ್ನೂ ಒಬ್ಬನೇ ಮಾಡುತ್ತೇನೆ ಅನ್ನುವ ಮನೋಭಾವ ಒಳ್ಳೆಯದಲ್ಲ. ಅದು ನಿಮ್ಮ ವ್ಯಾಪಾರವನ್ನು ಬೆಳೆಯದಂತೆ ಮಾಡುತ್ತದೆ.

ವ್ಯಾಪಾರದ ನಂತರ ನೀಡುವ ಸೇವೆ

ಒಂದು ವಸ್ತು ಮಾರಾಟದ ನಂತರ ಅನೇಕ ಸಮಸ್ಯೆಗಳು ಬರಬಹುದು ಆ ಸಮಸ್ಯೆಗಳಿಗೆ ಪರಿಹಾರ ಅಥವಾ ನೀಡುವ ಬೆಂಬಲ ಕೂಡ ಗುಣಮಟ್ಟ ನಿರ್ಧರಿಸುತ್ತದೆ. ಅಕಸ್ಮಾತ್ ಸರಿಪಡಿಸಲಾಗದಿದ್ದರೆ ಹೊಸ ವಸ್ತು ಕೊಡಬೇಕು. ಅದು ಕಂಪನಿಯ ಜವಾಬ್ದಾರಿ.

ಜಾಸ್ತಿ ಬಾಳಿಕೆ ಬರುವುದು ಹಾಗೂ ಕಡಿಮೆ ಸಮಸ್ಯೆ

ಒಂದು ವಸ್ತು ತುಂಬಾ ವರ್ಷಗಳವರೆಗೆ ಯಾವುದೇ ಸಮಸ್ಯೆ ಕೊಡದೆ ಬಾಳಿಕೆ ಬಂದರೆ ಅದರ ಗುಣಮಟ್ಟ ಜಾಸ್ತಿ ಎಂದರ್ಥ. ಉತ್ತಮ ಗುಣಮಟ್ಟದ ಬಿಡಿಭಾಗಗಳು ವಿನ್ಯಾಸದಿಂದ ಮಾತ್ರ ಇದು ಸಾಧ್ಯ.

ಹೆಚ್ಚಿನ ಉತ್ತಮ ಬ್ರ್ಯಾಂಡ್ ಗಳು ಹಾಗೂ ಕಂಪನಿಗಳು ತಮ್ಮ ವಸ್ತುವಿನ ಗುಣಮಟ್ಟದ ಬಗ್ಗೆ ತುಂಬಾ ಕಾಳಜಿ ವಹಿಸುತ್ತವೆ. ನೆನಪಿಡಿ ಉತ್ತಮ ಗುಣಮಟ್ಟ ಇದ್ದರೂ ಬೆಲೆ ಕೈಗೆಟುಕದಂತೆ ಇದ್ದರೆ ಕೂಡ ಗ್ರಾಹಕರು ಸಿಗೋದು ಕಷ್ಟ.

ಕಾರ್ಯ ಶೀಲತೆಯ ತುಂಬಾ ಮುಖ್ಯ

ಕಡಿಮೆ ಕರೆಂಟ್ , ಪೆಟ್ರೋಲ್ ಇಂಧನ ಬಳಸುವ ವಸ್ತು ಕೂಡ ಉತ್ತಮ. ಆ ಕಾರ್ಯಕ್ಷಮತೆಯಿಂದ ಗುಣಮಟ್ಟ ನಿರ್ಧಾರವಾಗುತ್ತದೆ. ಜನ ಜಾಸ್ತಿ ಕರೆಂಟು ಇಂಧನ ಬಳಸುವ ವಸ್ತುವನ್ನು ಇಷ್ಟಪಡುವುದಿಲ್ಲ.

ಗುಣಮಟ್ಟದ ದೃಷ್ಟಿಯಿಂದ ಸಲಹೆಗಳು ಹೀಗಿವೆ

ಅಂಗಡಿಯ ವ್ಯಾಪಾರಿಗಳಿಗೆ

  • ವಸ್ತುಗಳು ತಾಜಾ ಆಗಿ ಇದ್ದಷ್ಟು ಉತ್ತಮ. ಸಾಧ್ಯವಿದ್ದಷ್ಟು ಹಳೆಯ ವಸ್ತುಗಳನ್ನು ವಿಲೇವಾರಿ ಮಾಡಿ.
  • ಧೂಳು ಹಿಡಿಯದಂತೆ ಕಾಳಜಿವಹಿಸಿ. ಪ್ರತಿದಿನ ನಿಯಮಿತವಾಗಿ ಧೂಳು ಹೊಡೆದು ಸ್ವಚ್ಛಗೊಳಿಸಿ.
  • ಇರುವೆ, ಇಲಿ, ಜಿರಲೆ, ಹುಳುಗಳಿಂದ ವಸ್ತು ಹಾಳಾಗದಂತೆ ಜಾಗರೂಕರಾಗಿರಿ. ಮುಚ್ಚಳವಿರುವ ಕಂಟೇನರ್ ಬಳಸಿ.
  • ಉತ್ತಮ ಗುಣಮಟ್ಟದ ವಸ್ತು/ಬ್ರ್ಯಾಂಡ್ ಮಾರಾಟ ಮಾಡಿ. ಕಡಿಮೆ ಬೆಲೆ ಎಂದು ಕಳಪೆ ಗುಣಮಟ್ಟದ ವಸ್ತುಗಳನ್ನು ಮಾರಾಟ ಮಾಡಬೇಡಿ. ಎಲ್ಲ ವಸ್ತುಗಳು ಬಾಳಿಕೆ ಬರುವಂಥವು ಆಗಿರಲಿ.
  • ದಿನ ಬೆಳಿಗ್ಗೆ ಹಾಳಾದ ತರಕಾರಿ, ಹಣ್ಣು, ಅವಧಿ ಮುಗಿದ ವಸ್ತು ಪರಿಶೀಲಿಸಿ ಅವನ್ನು ಬಿಸಾಕಿ.
  • ಗ್ರಾಹಕರಿಗೆ ಕೊಡುವಾಗ ಇನ್ನೊಮ್ಮೆ ಗುಣಮಟ್ಟ ಪರಿಶೀಲಿಸಿ.
  • ಸರಿಯಾದ ಗಾತ್ರ ಟ್ರಯಲ್ ಮಾಡಿ ಗ್ರಾಹಕರಿಗೆ ವಸ್ತು ನೀಡಿ.
  • ಸರಿಯಾದ ಪ್ರಮಾಣ ಹಾಗೂ ಲೆಕ್ಕದ ಪ್ರಕಾರ ವಸ್ತು ನೀಡಿ.
  • ಅಕಸ್ಮಾತ ನೀಡಿದ ವಸ್ತು ಸರಿಯಿಲ್ಲವೆಂದು ಗ್ರಾಹಕರು ಬಂದರೆ ಪರಿಹಾರ ನೀಡಿ. ಮುಂದೆ ಹಾಗಾಗದಂತೆ ಜಾಗರೂಕತೆ ವಹಿಸಿ.
  • ಕಂಪನಿಯವರು ಉಚಿತವಾಗಿ ಕೊಟ್ಟರೂ ಕಳಪೆ ಗುಣಮಟ್ಟದ ವಸ್ತು ಇಡಬೇಡಿ.
  • ಹಾಕಿಸುವಾಗ ಯಾವುದೇ ವಸ್ತುಗಳು ಹಾಳಾಗದಂತೆ ನೋಡಿಕೊಳ್ಳಿ.
  • ನೀರು ಸೂರ್ಯನ ಬಿಸಿಲು ಇತ್ಯಾದಿಗಳಿಂದ ವಸ್ತು ಹಾಳಾಗದಂತೆ ನೋಡಿಕೊಳ್ಳಿ

ಕಂಪನಿಗಳಿಗೆ

  • ಉತ್ತಮ ಗುಣಮಟ್ಟದ ಹಾಗೂ ಕಾರ್ಯಶೀಲತೆ ಇರುವ ವಸ್ತು ವಿನ್ಯಾಸಗೊಳಿಸಿ.
  • ಉತ್ತಮ ಗುಣಮಟ್ಟದ ಬಿಡಿಭಾಗಗಳನ್ನು ಬಳಸಿ.
  • ಬಜೆಟ್ ಮೀಡಿಯಂ ಪ್ರೀಮಿಯಂ ಇರಲಿ. ಆದರೆ ಗುಣಮಟ್ಟದಲ್ಲಿ ರಾಜಿ ಬೇಡ. ಬಜೆಟ್ ವಸ್ತು ಕಡಿಮೆ ಫೀಚರ್ ಸೌಲಭ್ಯ ನೀಡಲಿ ಆದರೆ ಉತ್ತಮ ಬಾಳಿಕೆ ಬರಬೇಕು. ಸಮಸ್ಯೆ ನೀಡಬಾರದು.
  • ಎಲ್ಲ ಸಮಸ್ಯೆಗಳನ್ನು ಗ್ರಾಹಕರಿಂದ ತಿಳಿದು ಅದಕ್ಕೆ ಪರಿಹಾರ ನೀಡಿ. ಮುಂದೆ ಹಾಗಾಗದಂತೆ ನೋಡಿಕೊಳ್ಳಿ.
  • ಸಾಗಣೆಯಲ್ಲಿ ಸಂಗ್ರಹಿಸಿಡುವುದು ಯಾವುದೇ ವಸ್ತುಗಳು ಹಾಳಾಗದಂತೆ ಹೆಚ್ಚಾಗದಂತೆ ನೋಡಿಕೊಳ್ಳಿ.
  • ನಂತರದ ಸೇವೆ ತುಂಬಾ ಮುಖ್ಯ.
  • ಹೊಸ ತಂತ್ರಜ್ಞಾನ ಬಳಸಿ.

ರೈತರಿಗೆ

  • ಉತ್ತಮ ಗುಣಮಟ್ಟದ ಗೊಬ್ಬರ ಬೀಜ ಬಳಸಿ.
  • ಹಾನಿಕಾರಕ ರಾಸಾಯನಿಕ ಬಳಸದಿರಿ.
  • ಕೊಯ್ದ ತರಕಾರಿ ಹಣ್ಣು ತಾಜಾ ಆಗಿರುವಾಗ ಮಾರುಕಟ್ಟೆಗೆ ಗ್ರಾಹಕರಿಗೆ ತಲುಪಿಸಿ.
  • ಸಾಗಣೆಯಲ್ಲಿ ಸಂಗ್ರಹಿಸುವಾಗ ಹಾಳಾಗದಂತೆ ಹುಳ ಇಲಿ ಜಿರಲೆ ಇಂದ ನಾಶವಾಗದಂತೆ ಕಾಳಜಿವಹಿಸಿ.
  • ಎಂದಿಗೂ ಕಳಪೆ ಗುಣಮಟ್ಟದ ಧಾನ್ಯ ಬೆಳೆ ಬೆಳೆಯದಿರಿ.

ನೌಕರರಿಗೆ

  • ನಿಮ್ಮ ಕೆಲಸದ ಗುಣಮಟ್ಟ ಚೆನ್ನಾಗಿರಲಿ.
  • ಕೆಲಸ ಸರಿಯಾಗಿ ಕಲಿತು ಗಮನಕೊಟ್ಟು ಮಾಡಿ.
  • ಉತ್ತಮ ಗುಣಮಟ್ಟದ ವಸ್ತು ಸೇವೆ ನಿಮ್ಮ ಗುರಿಯಾಗಿರಲಿ.
  • ಯಾವಾಗಲೂ ಉತ್ತಮ ತಂತ್ರಜ್ಞಾನ ಬಳಸಿ.
  • ಬಾರಿ ಶ್ರಮದಿಂದ ಅಷ್ಟೇ ಅಲ್ಲ ಚಾಣಾಕ್ಷತೆಯಿಂದ ಕೆಲಸ ಮಾಡಿ.
  • ಪ್ರಾಮಾಣಿಕತೆಯಿಂದ ಕೆಲಸ ಮಾಡಿ.
  • ಆಫೀಸಲ್ಲಿ ಕೆಲಸದ ಸಮಯದಲ್ಲಿ ಕಾಲ್, ಸೋಷಿಯಲ್ ಮೀಡಿಯಾ ಇತ್ಯಾದಿ ಕಾಲಹರಣದಿಂದ ದೂರ ಇರಿ.

ಷೇರು ಮಾರುಕಟ್ಟೆಯಲ್ಲಿ ಬಂಡವಾಳ ಹೂಡುವವರಿಗೆ

  • ಗುಣಮಟ್ಟದ ಷೇರು ಖರೀದಿಸಿ.
  • ಮಾರುಕಟ್ಟೆಯ ಬಗ್ಗೆ ಶಿಕ್ಷಣ ಪಡೆದುಕೊಳ್ಳಿ.

ಕೊನೆಯ ಮಾತು

ಗ್ರಾಹಕರ ಸಂತೃಪ್ತಿಯೇ ವ್ಯಾಪಾರದ ಮುಖ್ಯ ಗುರಿ. ವಸ್ತುವಿನ ಗುಣಮಟ್ಟ, ಸೇವೆಯ ಗುಣಮಟ್ಟ ಮತ್ತೆ ಮತ್ತೆ ಗ್ರಾಹಕರನ್ನು ನಿಮ್ಮ ವ್ಯಾಪಾರದ ಕಡೆಗೆ ಬರುವಂತೆ ಮಾಡುತ್ತದೆ. ಗ್ರಾಹಕರು ನಿಮ್ಮ ವ್ಯಾಪಾರವನ್ನು ಸ್ನೇಹಿತರಿಗೆ ನೆಂಟರಿಗೆ ತಿಳಿಸಿ ಇನ್ನಷ್ಟು ಗ್ರಾಹಕರನ್ನು ಕಳುಹಿಸುತ್ತಾರೆ.

ಗುಣಮಟ್ಟವನ್ನು ಪರಾಮರ್ಶೆ ಗೊಳಿಸಿ ಎಲ್ಲೆಲ್ಲಿ ಸಾಧ್ಯವೋ ಇಂಪ್ರೂ ಮಾಡಿ. ಮೊದಲು ಯೋಜನೆ ಹಾಕಿ ಕೊಂಡು ಕಾರ್ಯಗತಗೊಳಿಸಿ ಮುಂದಿನ ಭಾಗದಲ್ಲಿ ಹೊಸ ವಿಷಯದೊಂದಿಗೆ ವ್ಯಾಪಾರ ಗುಟ್ಟು ಬರಲಿದೆ

ಈ ಲೇಖನ ವಿಸ್ಮಯ ಪತ್ರಿಕೆಯಲ್ಲಿ ೨೦ ಸಪ್ಟೆಂಬರ್ ೨೦೧೯ ರಂದು ಪ್ರಕಟ ಆಗಿತ್ತು.

0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

blogger

ತಪ್ಪದೇ ಓದಿ...

ವಿದೇಶ,ಬೆಂಗಳೂರು
©ಎಲ್ಲಾ ಹಕ್ಕುಗಳನ್ನು ಕಾದಿರಿಸಲಾಗಿದೆ. ಅನುಮತಿ ಇಲ್ಲದೇ ಲೇಖನಗಳನ್ನು ನಕಲು ಮಾಡುವಂತಿಲ್ಲ.
ಇದು ಮಸ್ತಕಮಣಿ.ಕಾಂ ಕೊಡುಗೆ