ಕ್ಯೂ ಆರ್ ಕೋಡ್ ನ ಉಪಯೋಗ

ಇಂದು ಈ ಕ್ಯೂ ಆರ್ ಕೋಡ್ ಹಲವು ಕಡೆ ಬಳಕೆ ಆಗುತ್ತಿದೆ. ಎಲ್ಲೆಲ್ಲಿ? ಬನ್ನಿ ನೋಡೋಣ.

ಮಾರ್ಕೆಟಿಂಗ್ ಮತ್ತು ಜಾಹೀರಾತು

ಗ್ರಾಹಕರಿಗೆ ವೆಬ್ ತಾಣದ ವಿಳಾಸ, ವಿಡಿಯೋ ಲಿಂಕ್, ಪ್ರೋತ್ಸಾಹಕರ ಕೊಡುಗೆಗಳು ಅಥವಾ ಹೆಚ್ಚಿನ ಮಾಹಿತಿ ನೀಡಲು ಜಾಹೀರಾತಲ್ಲಿ ಹಾಗೂ ವ್ಯಾಪಾರ ಪ್ರಚಾರ (ಮಾರ್ಕೆಟಿಂಗ್ ಕ್ಯಾಂಪೇನ್) ನಲ್ಲಿ ಬಳಕೆ ಮಾಡುತ್ತಾರೆ.

ವಸ್ತುಗಳ ಪ್ರಚಾರ

ಪೋಸ್ಟರ್ ಗಳು, ಪಾಂಪ್ಲೆಟ್ ಗಳು ಹಾಗೂ ವಸ್ತುಗಳ ಪ್ಯಾಕಿಂಗ್ ಮೇಲೆ ಇನ್ನಷ್ಟು ಮಾಹಿತಿ, ಆಫರ್ ನೀಡಲು ಬಳಸಲಾಗುತ್ತಿದೆ. ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿದಾಗ ಗ್ರಾಹಕರಿಗೆ ಕ್ಯಾಶ್ ಬ್ಯಾಕ್, ವೆಬ್ ತಾಣ, ವಿಡಿಯೋ ಅಥವಾ ವಿಶೇಷ ರಿಯಾಯಿತಿ ಕೂಡಾ ಸಿಗಬಹುದು.

ಗ್ರಾಹಕರ ಸಂಪರ್ಕ

ಬ್ರ್ಯಾಂಡ್ ಗಳು ಗ್ರಾಹಕರಿಂದ ನೇರ ಅನಿಸಿಕೆ ಪಡೆಯಲು, ಚಂದಾದಾರರಾಗಿ ಮಾಡಲು, ಆಫರ್ ನೀಡಲು, ವೈಯಕ್ತಿಕ ಅನುಭವ ನೀಡಲು ಸಹ ಕ್ಯೂ ಆರ್ ಕೋಡನ್ನು ಬಳಸಬಹುದು.

ರಿಟೈಲ್ ಮತ್ತು ಈಕಾಮರ್ಸ್

ಸೂಪರ್ ಮಾರ್ಕೆಟ್ ಹಾಗೂ ಈ ಕಾಮರ್ಸ್ ನಿರ್ವಹಣೆಗೆ ಕ್ಯೂ ಆರ್ ಕೋಡ್ ಸಹಾಯಕ.

ವಸ್ತುಗಳ ಮಾಹಿತಿ

ಸೂಪರ್ ಮಾರ್ಕೆಟ್ ಶೆಲ್ಫ್ ಮೇಲೆ ಅಥವಾ ವಸ್ತುಗಳ ಹೆಸರಿನ ಮೇಲೆ ಕ್ಯೂ ಆರ್ ಕೋಡ್ ನೀಡಿ ಗ್ರಾಹಕರಿಗೆ ತಕ್ಷಣ ಹೆಚ್ಚಿನ ಮಾಹಿತಿ, ವಿಶಿಷ್ಟತೆ, ರಿವ್ಯೂ ಅಥವಾ ಡಿಮೋ ವಿಡಿಯೋ ನೀಡಿ ಅವರಿಗೆ ಖರೀದಿಯ ನಿರ್ಧಾರಕ್ಕೆ ಸಹಾಯ ಮಾಡಬಹುದು.

ಮೊಬೈಲ್ ಪೇಮೆಂಟ್

ಗ್ರಾಹಕರು ಕ್ಯೂ ಆರ್ ಕೋಡ್ ಅನ್ನು ಚೆಕ್ ಔಟ್ ಕೌಂಟರ್ ಬಳಿ ಅಥವಾ ಪೇಮೆಂಟ್ ವಿಭಾಗದಲ್ಲಿ ಸ್ಕ್ಯಾನ್ ಮಾಡಲು ಅನುವು ಮಾಡಿ ಕೊಟ್ಟು ಅವರ ಸ್ಮಾರ್ಟ್ ಫೋನ್ ಬಳಸಿ ಹಣ ನೀಡಲು ಸಹಾಯಕ.

ವಸ್ತುಗಳ ನಿರ್ವಹಣೆ

ಕ್ಯೂ ಆರ್ ಕೋಡ್ ಅನ್ನು ಇನ್ವೆಂಟರಿ ಮ್ಯಾನೆಜ್ ಮೆಂಟ್ ಅಂದ್ರೆ ವಸ್ತುಗಳ ಪಟ್ಟಿ ನಿರ್ವಹಣೆ ವ್ಯವಸ್ಥೆಯಲ್ಲಿ ವಸ್ತುಗಳನ್ನು ಟ್ರ್ಯಾಕ್ ಮಾಡಲು ಬಳಸುತ್ತಾರೆ. ಇದರಿಂದ ವಸ್ತುಗಳು ಎಲ್ಲಿವೆ, ಕಡಿಮೆ ಇದೆಯಾ ಇತ್ಯಾದಿ ವಿಷಯಗಳನ್ನು ಕಂಡು ಹಿಡಿಯಬಹುದು. ಆರ್ಡರ್ ಪೂರೈಕೆ ಸಮಯದಲ್ಲಿ ಇದು ಸಹಾಯಕ.

ಹಣ ಸಂದಾಯ

ಮೊಬೈಲ್ ಹಣ ಸಂದಾಯದಲ್ಲಿ ಕೂಡಾ ಬಳಸಲಾಗುತ್ತಿದೆ. ಇದು ಗ್ರಾಹಕರಿಗೆ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ಅಂಗಡಿಗಳಲ್ಲಿ ಖರೀದಿ ಮುನ್ನ ಪೇಮೆಂಟ್ (ಹಣ ನೀಡುವದು) ಮಾಡಬಹುದು.

ಶಿಕ್ಷಣ ಮತ್ತು ತರಬೇತಿ (ಟ್ರೇನಿಂಗ್)

ಮುಂದುವರಿದ ಕಲಿಕೆಯ ವಸ್ತುಗಳು

ಶಾಲಾ ಪುಸ್ತಕಗಳಲ್ಲಿ, ವರ್ಕ್ ಶೀಟ್ ಗಳಲ್ಲಿ ಅಥವಾ ಶೈಕ್ಷಣಿಕ ಪರಿಕರಗಳಲ್ಲಿ ವಿಡಿಯೋ, ಪ್ರಶ್ನೋತ್ತರ, ಹೆಚ್ಚಿನ ಕಲಿಕೆಯ ವಸ್ತುಗಳನ್ನು ನೀಡುವ ಕ್ಯೂ ಆರ್ ಕೋಡ್ ಹಾಕುವ ಮೂಲಕ ಕಲಿಕೆಯ ಅನುಭವ ಹೆಚ್ಚಿಸಬಹುದು.

ವರ್ಚುವಲ್ ಟೂರ್

ಮ್ಯೂಸಿಯಂ, ಐತಿಹಾಸಿಕ ತಾಣ ಅಥವಾ ಶೈಕ್ಷಣಿಕ ಪ್ರದರ್ಶನಗಳಲ್ಲಿ ಕ್ಯೂ ಆರ್ ಕೋಡ್ ಗಳನ್ನು ಇಟ್ಟು ಸ್ವಂತ ಮಾರ್ಗ ಅರಿತು ಟೂರ್ ಅಥವಾ ಆಳವಾದ ಕಲಿಕೆಯ ಅನುಭವ ಕೂಡಾ ನೀಡಬಹುದು. ಕ್ಯೂ ಆರ್ ಕೋಡ್ ಗಳು ಆಡಿಯೋ ಮಾರ್ಗದರ್ಶನ, ವಿಡಿಯೋ ಡಿಮೋ ಅಥವಾ ಆ ಸಂದರ್ಭಕ್ಕೆ ಅಗತ್ಯವಾದ ಹೆಚ್ಚಿನ ಮಾಹಿತಿ ನೀಡಬಹುದು.

ತರಬೇತಿ ಮತ್ತು ಪ್ರಮಾಣ ಪತ್ರ

ವೃತ್ತಿಪರ ತರಬೇತಿ ಪ್ರೊಗ್ರಾಮ್ ಗಳು ಹಾಗೂ ಪ್ರಮಾಣ ಪತ್ರ ನೀಡುವ ಕೋರ್ಸ್ ಗಳಲ್ಲಿ ಆನ್ ಲೈನ್ ಮೊಡ್ಯೂಲ್ ಗೆ ಪ್ರವೇಶ ನೀಡಲು, ಪ್ರಶ್ನೋತ್ತರ, ವಿಡಿಯೋಗಳನ್ನು ನೀಡಲು ಕ್ಯೂ ಆರ್ ಕೋಡನ್ನು ಬಳಸಲಾಗುತ್ತದೆ. ಇದು ವಿದ್ಯಾರ್ಥಿಗಳಿಗೆ ತಮ್ಮ ನೈಪುಣ್ಯತೆ ಹೆಚ್ಚಿಸಿ ಕೊಳ್ಳಲು ಹಾಗೂ ಮುನ್ನಡೆಯನ್ನು ಗುರುತಿಸಲು ಸಹಾಯಕ ಕೂಡಾ.

ಪ್ರಯಾಣ ಮತ್ತು ಅತಿಥಿ ಸತ್ಕಾರ

ಟಿಕೆಟ್ ಹಾಗೂ ವಿಮಾನದ ಬೋರ್ಡಿಂಗ್ ಪಾಸ್ ಗಳು

ಇಲೆಕ್ಟ್ರಾನಿಕ್ ಟಿಕೆಟ್ ವ್ಯವಸ್ಥೆಯಲ್ಲೂ ಕೂಡಾ ಕ್ಯೂ ಆರ್ ಕೋಡ್ ಬಳಕೆ ಆಗುತ್ತೆ. ಗ್ರಾಹಕರು ಈ ಮೂಲಕ ತಮ್ಮ ಸ್ಮಾರ್ಟ್ ಫೋನ್ ಅಲ್ಲಿ ಟಿಕೆಟ್ ಹಾಗೂ ಬೋರ್ಡಿಂಗ್ ಪಾಸ್ ಅನ್ನು ಪಡೆಯಬಹುದಾಗಿದೆ. 

ಇವೆಂಟ್ ಟಿಕೆಟ್, ಹೊಟೆಲ್ ರಿಸರ್ವೇಶನ್, ಬೋರ್ಡಿಂಗ್ ಪಾಸ್ ಎಲ್ಲ ಕಡೆ ಒಳಗೆ ಹೋಗಲು ಬಳಸಿ ಕಾಗದದ ಬಳಕೆ ಕಡಿಮೆ ಮಾಡಬಹುದು. ಗೇಟ್ ಬಳಿ ಅಥವಾ ಚೆಕ್ ಇನ್ ಕೌಂಟರ್ ಬಳಿ ಕ್ಯೂ ಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿ ಬುಕಿಂಗ್ ಅನ್ನು ಪರಿಶೀಲಿಸಬಹುದು ಹಾಗೂ ಸೇವೆಯ ಅನುಮತಿಯನ್ನು ನೀಡಬಹುದು.

ಪ್ರವಾಸಿಗರಿಗೆ ಮಾಹಿತಿ

ಪ್ರವಾಸಿ ನಕ್ಷೆಯ ಮೇಲೆ, ಬೋರ್ಡ್ ಮೇಲೆ ಅಥವಾ ನಗರ ಮಾರ್ಗದರ್ಶಿಯ ಮೇಲೆ ಕ್ಯೂ ಆರ್ ಕೋಡ್ ನೀಡಿ ಪ್ರಯಾಣಿಕರಿಗೆ ಅಲ್ಲಿನ ಆಕರ್ಷಣೆಯ ಬಗ್ಗೆ, ಊಟ-ತಿಂಡಿ ವ್ಯವಸ್ಥೆಯ ಬಗ್ಗೆ, ಸಾರಿಗೆ ವ್ಯವಸ್ಥೆಯ ಬಗ್ಗೆ ಮಾಹಿತಿ ನೀಡಿ ಪ್ರಯಾಣದ ಅನುಭವ ಹೆಚ್ಚಿಸಲು ಬಳಸಲಾಗುತ್ತಿದೆ.

ಹೋಟೆಲ್ ಸೌಲಭ್ಯ ಹಾಗೂ ಸೇವೆಗಳು

ಕ್ಯೂ ಆರ್ ಕೋಡ್ ಅನ್ನು ಹೋಟೆಲ್ ಗಳು ಅತಿಥಿಗಳಿಗೆ ಸೌಲಭ್ಯ, ಸೇವೆಗೆ ಪ್ರವೇಶ ನೀಡಲು ರೂಂ ಸರ್ವೀಸ್ ಮೆನುಗಳಲ್ಲಿ, ಸ್ಪಾ ರಿಸರ್ವೇಶನ್ ಗಳಲ್ಲಿ, ರಿವಾರ್ಡ್ ಪ್ರೋಗ್ರಾಂ ಅಲ್ಲಿ ಬಳಸುತ್ತಾರೆ.

ಆಸ್ಪತ್ರೆ ಮತ್ತು ಔಷದಿ

ವೈದ್ಯಕೀಯ ಸಂಶೋಧನೆ, ಆಸ್ಪತ್ರೆ, ಔಷದಿ ಹೀಗೆ ಹಲವು ಕಡೆ ಕ್ಯೂ ಆರ್ ಕೋಡನ್ನು ರೋಗಿಗಳನ್ನು, ಔಷದಿಯನ್ನು ಗುರುತಿಸಲು, ಅದರ ಮಾಹಿತಿ ಪಡೆಯಲು ಬಳಸಬಹುದು.

ರೋಗಿಯ ಮಾಹಿತಿ

ರೋಗಿಯ ಕೈ ಬ್ಯಾಂಡ್ ಅಥವಾ ವೈದ್ಯಕೀಯ ರೆಕಾರ್ಡ್ ಮೇಲಿರುವ ಕ್ಯೂ ಆರ್ ಕೋಡ್ ಗಳು ರೋಗಿಯ ಬಗ್ಗೆ ಮಾಹಿತಿಯನ್ನು ಡಾಕ್ಟರ್, ನರ್ಸ್ ಗಳಿಗೆ ರೋಗಿಯ ಮಾಹಿತಿ, ಸುಶ್ರೂಶೆಯ ಪ್ಲ್ಯಾನ್, ಟ್ರೀಟ್ ಮೆಂಟ್ ಇತಿಹಾಸ, ಅಲರ್ಜಿ ಮಾಹಿತಿಯನ್ನು ಸುರಕ್ಷಿತವಾಗಿ ನೀಡಬಹುದು.

ವೈದ್ಯಕೀಯ ಚಿಕಿತ್ಸೆಯ ಮ್ಯಾನೆಜ್ ಮೆಂಟ್

ಔಷದಿಯ ಪ್ಯಾಕೆಜಿಂಗ್ ಅಥವಾ ವೈದ್ಯರ ಲಿಖಿತ ಸಲಹೆಯ ಮೇಲಿನ ಕ್ಯೂ ಆರ್ ಕೋಡ್ ರೋಗಿಗೆ ಡೋಸೇಜ್ ಸೂಚನೆ, ಔಷದಿಯ ಆರ್ಡರ್ ಆಯ್ಕೆ ನೀಡಬಹುದು. ಅದೇ ರೀತಿ ಔಷದಿ ಅಂಗಡಿಯವರು ಕೂಡಾ ಔಷದಿ ನಕಲಿಯೋ ಅಸಲಿಯೋ ಅಥವಾ ಮಾರಾಟವನ್ನು ಕ್ಯೂ ಆರ್ ಕೋಡ್ ಬಳಸಿ ಪತ್ತೆ ಮಾಡಬಹುದು.

ಔಷದಿಯ ಪರೀಕ್ಷೆ ಹಾಗೂ ಸಂಶೋಧನೆ

ರೋಗಿಯ ಆಯ್ಕೆ, ಮಾಹಿತಿ ಸಂಗ್ರಹಣೆ ಹಾಗೂ ಸಂಶೋಧನೆಯನ್ನು ಟ್ರ್ಯಾಕ್ ಮಾಡುವದಕ್ಕೆ ಕ್ಯೂ ಆರ್ ಕೋಡ್ ಸಹಾಯಕ. ಭಾಗವಹಿಸುವವನು ಕೂಡಾ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ಸ್ಟಡಿ ಮಾಹಿತಿ, ಅರ್ಜಿಗಳು ಹಾಗೂ ಡೈರಿಯನ್ನು ಪಡೆಯಬಹುದು.

ಕೊನೆಯ ಮಾತು

ಕ್ಯೂ ಆರ್ ಕೋಡ್ ತುಂಬಾ ಉಪಯುಕ್ತ ಟೂಲ್ ಆಗಿದೆ. ಮಾಹಿತಿಯನ್ನು ಸುಲಭವಾಗಿ ಸ್ಕ್ಯಾನ್ ಮಾಡುವ ರೀತಿಯಲ್ಲಿ ಉಳಿಸಿ ಕಳುಹಿಸಬಹುದು. ಅವು ಸದ್ಯಕ್ಕೆ ಹಲವು ಬಗೆಯ ಉಪಯೋಗ ತರ ತರಹದ ಇಂಡಸ್ಟ್ರಿಯಲ್ಲಿ ಹೊಂದಿದ್ದು  ಇನ್ನೂ ಹಲವು ಕಾಲ ಮುಖ್ಯ ತಂತ್ರಜ್ಞಾನ ಆಗಿ ಉಳಿಯಲಿದೆ.

ಕ್ಯೂ ಆರ್ ಕೋಡ್ ಇತಿಹಾಸ

ಬಹುಶಃ ನಮಗೆ ಭಾರತದಲ್ಲಿ ಈ ಕ್ಯೂ ಆರ್ ಕೋಡ್ ಸಾರ್ವಜನಿಕರಿಗೆ ಪರಿಚಯ ಆಗಿದ್ದೇ ವೆಬ್ ತಾಣದ ವಿಳಾಸ, ಮ್ಯಾಪ್ ಲೊಕೇಶನ್ (ನಕ್ಷೆಯ ಜಾಗ) ಹಾಗೂ ಪೇಮೆಂಟ್ ಮಾಡುವ ಎಪ್ ಗಳಿಂದ.

ಆದರೆ ಕ್ಯೂ ಆರ್ ಕೋಡ್ ನ ಪಯಣ ಆರಂಭ ಆಗಿದ್ದು ಜಪಾನಿನ ವಾಹನ ಕಾರ್ಖಾನೆಯಲ್ಲಿ. ಕ್ರಮೇಣ ಬೇರೆ ಬೇರೆ ಕೆಲಸಕ್ಕೆ ಬಳಕೆ ಆಗುವದಕ್ಕೆ ಪ್ರಪಂಚದಾದ್ಯಂತ ಆರಂಭ ಆಯ್ತು.

ಕ್ಯೂ ಆರ್ ಕೋಡ್ ಉಗಮ

ಜಪಾನಿನ ಡೆನ್ಸೋ ವೇವ್ ಅನ್ನೋ ಕಂಪನಿಗೆ ಒಂದು ಸಮಸ್ಯೆ ಇತ್ತು. ತಯಾರಿಕೆಯಲ್ಲಿ ವಾಹನಗಳ ಬಿಡಿ ಭಾಗಗಳ ಟ್ರ್ಯಾಕಿಂಗ್ ಅನ್ನು ಇನ್ನೂ ಉತ್ತಮ ಗೊಳಿಸ ಬೇಕಿತ್ತು. ಅದಕ್ಕಾಗಿ ಸಂಪ್ರದಾಯಿಕ ಬಾರ್ ಕೋಡ್ ಗಿಂತಲೂ ಜಾಸ್ತಿ ಮಾಹಿತಿ ಇಟ್ಟು ಕೊಳ್ಳ ಬಲ್ಲ ಕೋಡ್ ಅವಶ್ಯಕತೆ ಯಿತ್ತು.

ಈ ಸಮಸ್ಯೆ ಪರಿಹಾರಕ್ಕೆ ಬಾರ್ ಕೋಡ್ ಗೆ ಪರ್ಯಾಯ ಕೋಡ್ ಹುಡುಕಲಾರಂಭಿಸಿತು. ೧೯೯೪ರಲ್ಲಿ ಟೋಯಟಾ ಕಂಪನಿಯ ಉಪ ಕಂಪನಿಯಾದ ಡೆನ್ಸೋ ವೇವ್ ಕ್ಯೂ ಆರ್ ಕೋಡ್ ಅನ್ನು ಅನ್ವೇಷಣೆ ಮಾಡಿತು.

ಬಾರ್ ಕೋಡ್ ಗಿಂತಲೂ ಉತ್ತಮ

ಕ್ಯೂ ಆರ್ ಕೋಡ್ ಅನ್ನು ಬಾರ್ ಕೋಡ್ ಗಿಂತಲೂ ಜಾಸ್ತಿ ಮಾಹಿತಿ ಇಟ್ಟು ಕೊಳ್ಳಲು ವಿನ್ಯಾಸ ಮಾಡಲಾಗಿದೆ. ಬಾರ್ ಕೋಡ್ ಕೇವಲ ಒಂದು ಆಯಾಮದಲ್ಲಿ ಅಡ್ಡಡ್ಡವಾಗಿ ಮಾತ್ರ ಮಾಹಿತಿ ಹಿಡಿದಿಡಬಹುದು. 

ಆದರೆ ಕ್ಯೂ ಆರ್ ಕೋಡ್ ಎರಡು ಆಯಾಮ (ಟುಡಿ) ಆಗಿದ್ದು ಬರಿ ಅಡ್ಡಡ್ಡ ಮಾತ್ರ ಅಲ್ಲ ಲಂಬವಾಗಿ ಕೂಡಾ ಮಾಹಿತಿ ಉಳಿಸುತ್ತದೆ. ಇದರಿಂದ ಬಾರ್ ಕೋಡ್ ಅಷ್ಟೇ ಜಾಗದಲ್ಲಿ ಹೆಚ್ಚು ಮಾಹಿತಿ ಉಳಿಸುತ್ತದೆ.

ಸಾರ್ವಜನಿಕ ಬಳಕೆ

ಡೆನ್ಸೋ ವೇವ್ ಕ್ಯೂ ಆರ್ ಕೋಡ್ ನ ವಿನ್ಯಾಸ ಹಾಗೂ ವಿಶಿಷ್ಟತೆಯನ್ನು ಸಾರ್ವಜನಿಕರಿಗೆ ಮುಕ್ತವಾಗಿ ನೀಡಲು ನಿರ್ಧರಿಸಿತು. ಇದು ಡೆವೆಲಪರ್ ಹಾಗೂ ಕಂಪನಿಗಳು ಯಾವುದೇ ಲೈಸೆನ್ಸ್ ಖರ್ಚು ಹಾಗೂ ಕಾನೂನಿನ ಸಮಸ್ಯೆ ಇಲ್ಲದೇ ಬಳಸಲು ಅನುವು ಮಾಡಿತು.

ಕ್ಯೂ ಆರ್ ಕೋಡ್ ಜಗತ್ತಿನಾದ್ಯಂತ ಜನಪ್ರಿಯ ಆಗಲು ಇದೂ ಒಂದು ಕಾರಣ.

ಕ್ಯೂ ಆರ್ ಕೋಡ್ ಬಳಕೆ

೧೯೯೦ರ ದಶಕದ ಕೊನೆಯಲ್ಲಿ ಹಾಗೂ ೨೦೦೦ರ ಆರಂಭದಲ್ಲಿ ಜಪಾನಿನಲ್ಲಿ ಕ್ಯೂ ಆರ್ ಕೋಡ್ ಜನಪ್ರಿಯ ಪಡೆದು ಕೊಂಡಿತು. ಮೊದಲು ವಾಹನ ಕೈಗಾರಿಕೆಯಲ್ಲಿ ಬಳಕೆ ಆಗಿ ಆಮೇಲೆ ತಯಾರಿಕೆ, ಸಾಗಣಿಕೆ, ರಿಟೇಲ್ ಕೈಗಾರಿಕೆಗಳಲ್ಲೂ ಬಳಸಲಾರಂಭಿಸಿದರು.

ಇಂಟರ್ನೆಟ್ ಹಾಗೂ ಕ್ಯಾಮೆರಾ ಇರುವ ಸ್ಮಾರ್ಟ್ ಫೋನುಗಳ ಕ್ರಾಂತಿ ಕ್ಯೂ ಆರ್ ಕೋಡ್ ಬಳಕೆಗೆ ಉತ್ತೇಜನ ನೀಡಿತು. ಜನ ಸಾಮಾನ್ಯರೂ ಕೂಡಾ ಕ್ಯೂ ಆರ್ ಕೋಡ್ ಬಳಸುವಂತೆ ಆಯ್ತು.

ಕ್ಯೂ ಆರ್ ಕೋಡ್ ನಮ್ಮ ಪ್ರತಿದಿನದ ಜೀವನದಲ್ಲಿ ಎಲ್ಲ ಕಡೆ ಕಾಣ ಸಿಗುತ್ತೆ. ಪ್ರಾಡಕ್ಟ್ ಪ್ಯಾಕೇಜಿಂಗ್, ಜಾಹೀರಾತುಗಳಲ್ಲಿ,  ಟಿಕೆಟ್, ಬೋರ್ಡಿಂಗ್ ಪಾಸ್, ರೆಸ್ಟಾರೆಂಟ್ ಮೆನು ಹೀಗೆ ಹಲವು ಕಡೆ ಕಾಣ ಸಿಗುತ್ತವೆ.

ಅಂತರಾಷ್ಟ್ರೀಯ ಮಾನದಂಡ

ಇಂದು ಕ್ಯೂ ಆರ್ ಕೋಡ್ ಜಗತ್ತಿನ ಎಲ್ಲ ಕಡೆ ಒಂದೇ ರೀತಿಯ ರಚನೆ, ಅಲ್ಗಾರಿತಮ್ ಅನ್ನು ಬಳಸುವದರಿಂದ ಎಲ್ಲ ಕಡೆ ಯಾವುದೇ ಸಮಸ್ಯೆ ಇಲ್ಲದೇ ಬಳಸಬಹುದು.

ಅಂತರಾಷ್ಟ್ರೀಯ ಮಾನದಂಡಗಳ ಸಂಸ್ಥೆ ಕ್ಯೂ ಆರ್ ಕೋಡ್ ಅನ್ನು ಅಂತರಾಷ್ಟ್ರೀಯ ಮಾನದಂಡ ಎಂದು ೨೦೦೦ರಲ್ಲಿ ಗುರುತಿಸಿದೆ. (ISO/IEC 18004:2015) ಇದು ರಚನೆ, ಎನ್ ಕೋಡ್ ಹಾಗೂ ಡಿಕೋಡ್ ಮಾಡುವ ಅಲ್ಗಾರಿತಮ್ ಗಳನ್ನು ಸ್ಟಾಂಡರ್ಡ್ ಮಾಡುವದರ ಮೂಲಕ ಇನ್ನಷ್ಟು ಜಾಗತಿಕ ಮಟ್ಟದಲ್ಲಿ ಬಳಕೆ ಆಗಲು ಸಹಾಯ ಮಾಡಿದೆ.

ಕ್ಯೂ ಆರ್ ಕೋಡ್ ಗಳು ಕಾಲ ಕಳೆದಂತೆ ಹೊಸ ಹೊಸ ಸೌಲಭ್ಯ ಪಡೆದು ಕೊಳ್ಳುತ್ತಿದೆ. ಡೈನಾಮಿಕ್ ಕ್ಯೂ ಆರ್ ಕೋಡ್ ಹಾಗೂ ಎನ್ ಕ್ರಿಪ್ಶನ್ ಕ್ಯೂ ಆರ್ ಕೋಡ್ ಹೀಗೆ ಸುಧಾರಿತ ತಂತ್ರಜ್ಞಾನ ಪಡೆದು ಹೊಸತನ ಪಡೆಯುತ್ತಿದೆ.

ವಿಶೇಷ ಸೂಚನೆ: ಚಿತ್ರಗಳನ್ನು ಕೃತಕ ಬುದ್ದಿವಂತಿಕೆ ಬಳಸಿ ಮಾಡಲಾಗಿದೆ. ಇವೆಲ್ಲ ನೈಜತೆಯನ್ನು ಪ್ರತಿಬಿಂಬಿಸದು.

ಕ್ಯೂ ಆರ್ ಕೋಡ್ ಎಂದರೇನು?

ನೀವು ಒಂದು ಅಂಗಡಿಯಲ್ಲಿ ಫೋನ್ ನಿಂದ ಹಣ ಕೊಡಲು ಅಥವಾ ಯಾವುದೋ ಜಾಹಿರಾತಲ್ಲೋ ಇಲ್ಲಾಂದ್ರೆ ವಿಸಿಟಿಂಗ್ ಕಾರ್ಡ್ ಅಲ್ಲಿ, ಕೆಲವೊಮ್ಮೆ ಆಮಂತ್ರಣ ಪತ್ರಿಕೆಯಲ್ಲಿ ಚಿಕ್ಕ ಚಿಕ್ಕ ಚೌಕ ಹೊಂದಿರುವ ಸ್ಕ್ಯಾನಿಂಗ್ ಕೋಡ್ ನೀವು ನೋಡಿರಬಹುದು.

ಕ್ಯೂ ಆರ್ ಕೋಡ್ ಮೊದಲು ಕಂಡು ಹಿಡಿದಿದ್ದು ಜಪಾನ್ ನಲ್ಲಿ.

ಕ್ಯೂ ಆರ್ ಕೋಡ್ ಪೂರ್ಣ ಹೆಸರೇನು?

ಅದನ್ನು ಕ್ಯೂ ಆರ್ ಕೋಡ್ ಎಂದು ಕರೆಯುತ್ತಾರೆ. ಕ್ಯೂ ಆರ್ (QR) ಎಂದರೆ ಕ್ವಿಕ್ ರಿಸ್ಪಾನ್ಸ್ (Quick Response) ಕೋಡ್ ಇದರ ಪೂರ್ಣ ಹೆಸರು. ಅಂದರೆ ಶೀಘ್ರವಾಗಿ ಪ್ರತಿಕ್ರಿಯೆ ನೀಡುವ, ತಡ ಮಾಡದೇ ಉತ್ತರ ನೀಡುವ ಎಂದರ್ಥ.

ಕ್ಯೂ ಆರ್ ಕೋಡ್ ಇತಿಹಾಸ

೧೯೯೪ರಲ್ಲಿ ಟೋಯೋಟಾದ ಭಾಗವಾದ ಡೆನ್ಸೋ ವೇವ್ (Denso Wave) ಎಂಬ ಜಪಾನಿ ಕಂಪನಿ ಕ್ಯೂ ಆರ್ ಕೋಡ್ ಅನ್ನು ಕಂಡು ಹಿಡಿಯಿತು. ಮೊದಲು ನಿರ್ಮಾಣದ ಸಮಯದಲ್ಲಿ ವಾಹನ ಟ್ರ್ಯಾಕ್ ಮಾಡಲು ಬಳಸಲಾಗುತಿತ್ತು.

ಕ್ಯೂ ಆರ್ ಕೋಡ್ ಒಂದು ಓಪನ್ ಸ್ಟಾಂಡರ್ಡ್ (ತೆರೆದ ಮಾನದಂಡ) ಆಗಿದೆ.

ಡೆನ್ಸೋ ವೇವ್ ಕ್ಯೂ ಆರ್ ಕೋಡ್ ಅನ್ನು ಸಾರ್ವಜನಿಕ ಉಪಯೋಗಕ್ಕೆ ಬಿಟ್ಟು ಕೊಟ್ಟಿದೆ, ಯಾವುದೇ ಪೇಟೆಂಟ್ ಮಿತಿ ಹಾಕಿಲ್ಲ. ಅದೂ ಕೂಡ ವ್ಯಾಪಕ ಬಳಕೆಗೆ ಕಾರಣ.

ಕ್ಯೂ ಆರ್ ಕೋಡ್ ಹೇಗಿರುತ್ತದೆ?


ಕ್ಯೂ ಆರ್ ಕೋಡ್ ಅಲ್ಲಿ ಬಿಳಿಯ ಬಣ್ಣದ ತೆರೆಯ ಮೇಲೆ ಕಪ್ಪು ಬಣ್ಣದ ಚಿಕ್ಕ ಚಿಕ್ಕ ಚೌಕಗಳನ್ನು ಒಂದು ಚೌಕದ ಆಕಾರದಲ್ಲಿ ಜೋಡಿಸಲಾಗಿರುತ್ತದೆ.

ಈ ಕೋಡ್ ಲಂಬವಾಗಿ (ಮೇಲಿನಿಂದ ಕೆಳಗೆ) ಅಗಲವಾಗಿ (ಎಡದಿಂದ ಬಲಕ್ಕೆ) ಎರಡೂ ದಿಕ್ಕಿನಲ್ಲಿ ಮಾಹಿತಿ ಉಳಿಸುವ ಸಾಮರ್ಥ್ಯ ಹೊಂದಿದೆ.

ನಿಮ್ಮ ಕೈಯಲ್ಲಿರೋ ಸ್ಮಾರ್ಟ್ ಫೋನ್ ತೆಗೆದು ಅದರಲ್ಲಿ ಕ್ಯಾಮೆರಾ ಎಪ್ ತೆಗೆದು ಒಮ್ಮೆ ಈ ಮೇಲಿನ ಕ್ಯೂ ಆರ್ ಕೋಡ್ ತೋರಿಸಿ. ಎಲ್ಲ ಸರಿಯಾಗಿದ್ದರೆ ನಿಮಗೆ ಮಸ್ತಕಮಣಿ.ಕಾಂ ವೆಬ್ ತಾಣದ ವಿಳಾಸ ಗೋಚರಿಸುತ್ತದೆ!

ಕ್ಯೂ ಆರ್ ಕೋಡ್ ಏನನ್ನು ಉಳಿಸಬಹುದು?

ಕ್ಯೂ ಆರ್ ಕೋಡ್ ಒಂದು ಎರಡು ಆಯಾಮದ (ಟು ಡೈಮೆನ್ಶನಲ್) ಮೆಟ್ರಿಕ್ಸ್ ಬಾರ್ ಕೋಡ್ ಆಗಿದ್ದು ಇದರಲ್ಲಿ ಬರಹ / ಪಠ್ಯವನ್ನು, ವೆಬ್ ವಿಳಾಸವನ್ನು, ವಿಳಾಸವನ್ನು, ಮ್ಯಾಪ್ ಲೊಕೇಶನ್ ಅಂದರೆ ಸ್ಥಳದ ಮಾಹಿತಿ, ವಸ್ತುಗಳ ಮಾಹಿತಿ ಅಥವಾ ಇನ್ನಿತರ ಮಾಹಿತಿ ಕೂಡಾ ಉಳಿಸಬಹುದು.

ಕ್ಯೂ ಆರ್ ಕೋಡ್ ನಲ್ಲಿ ಬಾರ್ ಕೋಡ್ ಗಿಂತ ಜಾಸ್ತಿ ಮಾಹಿತಿಯನ್ನು ಉಳಿಸಬಹುದು ಅಷ್ಟೇ ಅಲ್ಲ ಚಿಕ್ಕ ಗಾತ್ರದಲ್ಲಿ ಮುದ್ರಿಸಿದರೂ ಅದನ್ನು ಕ್ಯೂ ಆರ್ ಕೋಡ್ ಸ್ಕ್ಯಾನರ್ ಓದಬಲ್ಲುದು.

ಕ್ಯೂ ಆರ್ ಕೋಡ್ ಓದುವದು ಹೇಗೆ?

ಕ್ಯೂ ಆರ್ ಕೋಡ್ ಅನ್ನು  ಸ್ಮಾರ್ಟ್ ಫೋನ್ ಅಥವಾ ಡಿಜಿಟಲ್ ಕ್ಯೂ ಆರ್ ಕೋಡ್ ರೀಡರ್ ಬಳಸಿ ಸ್ಕ್ಯಾನ್ ಮಾಡಿ ಅದರಲ್ಲಿರುವ ಸಂಕೇತವನ್ನು ಸುಲಭವಾಗಿ ಬಿಡಿಸಲು ವಿನ್ಯಾಸ ಮಾಡಲಾಗಿದೆ.

ಕ್ಯೂ ಆರ್ ಕೋಡ್ ಅನ್ನು  ಸುಲಭವಾಗಿ ಸ್ಕ್ಯಾನ್ ಮಾಡಬಲ್ಲ ಸ್ಮಾರ್ಟ್ ಫೋನ್ ಬಳಕೆ ಹೆಚ್ಚಿದ ಹಾಗೆ ಕ್ಯೂ ಆರ್ ಕೋಡ್ ನಲ್ಲಿ ಇರುವ ಮಾಹಿತಿ ಪಡೆಯುವದು ಸುಲಭ ಆಗಿದೆ. ಇದರಿಂದ ಈ ಡಿಜಿಟಲ್ ಯುಗದಲ್ಲಿ ಕ್ಯೂ ಆರ್ ಕೋಡ್ ನಮ್ಮ ಪ್ರತಿದಿನದ ಜೀವನದ ಭಾಗವಾಗಿ ಬಿಟ್ಟಿದೆ.

ಕ್ಯೂ ಆರ್ ಕೋಡ್ ಬಳಕೆ ಎಲ್ಲೆಲ್ಲಿ?

ಇವನ್ನು ಮಾರ್ಕೆಟಿಂಗ್, ಹಣ ಸಂದಾಯಕ್ಕೆ, ಟಿಕೆಟ್ ಗಳಲ್ಲಿ, ವಸ್ತುಗಳ ಪ್ಯಾಕಿಂಗ್ ಗಳ ಮೇಲೆ ಹಾಗೂ ವಸ್ತುಗಳ ಪಟ್ಟಿ ಮಾಡಲು ಹೀಗೆ ಹಲವು ಬಗೆಗಳಲ್ಲಿ ಬಳಸಲಾಗುತ್ತದೆ.

ಕೊನೆಯ ಮಾತು

ಕ್ಯೂ ಆರ್ ಕೋಡ್ ಜಪಾನಿನಲ್ಲಿ ಕಂಡು ಹಿಡಿದ ೨ನೆ ಆಯಾಮ ಮೆಟ್ರಿಕ್ಸ್ ಕೋಡ್ ಆಗಿದ್ದು ಸ್ಮಾರ್ಟ್ ಫೋನ್ ಬಳಸಿ ಮಾಹಿತಿ ಓದಬಹುದು. ಬ್ಯುಸಿನೆಸ್ ಕಾರ್ಡ್, ಟಿಕೆಟ್, ಹಣ ಸಂದಾಯ ಹೀಗೆ ಹಲವು ಕಡೆ ಇದು ಉಪಯೋಗಕ್ಕೆ ಬಳಕೆ ಆಗುತ್ತಲಿದೆ.

ನಿಮ್ಮ ವೆಬ್ ತಾಣಕ್ಕೆ ಕ್ಯೂ ಆರ್ ಕೋಡ್ ಮಾಡೋದು ಹೇಗೆ?

ಒಬ್ಬ ವ್ಯಾಪಾರಿಗೆ ಕ್ಯೂ ಆರ್ ಕೋಡ್ ಜ್ಞಾನ ಅತಿ ಮುಖ್ಯ. ನಿಮ್ಮ ಅಂಗಡಿ ಅಥವಾ ಕಂಪನಿಯ ವೆಬ್ ತಾಣ ಇರಬಹುದು, ಅಥವಾ ಇಸ್ಟಾಗ್ರಾಂ / ಫೇಸ್ ಬುಕ್ ಪ್ರೊಫೈಲ್ ಇರಬಹುದು ಹೀಗೆ ಯಾವುದೇ ತಾಣವನ್ನು ಬರಿ ವಿಳಾಸ ನೀಡುವದರಿಂದ ಇಂದಿನ ಜನಕ್ಕೆ ಅದನ್ನು ಮೊಬೈಲ್ ಅಲ್ಲಿ ಟೈಪ್ ಮಾಡಲೂ ಕೂಡಾ ತಾಳ್ಮೆ ಇರದು!

ಅದಕ್ಕೆ ಒಂದು ಸರಳ ಪರಿಹಾರ ಎಂದರೆ ಕ್ಯೂ ಆರ್ ಕೋಡನ್ನು ಬ್ಯುಸಿನೆಸ್ ಕಾರ್ಡ್ ಅಥವಾ ಜಾಹೀರಾತುಗಳಲ್ಲಿ ಬಳಸಿ. 

ಗ್ರಾಹಕರು ಅದನ್ನು ಮೊಬೈಲ್ ಅಲ್ಲಿ ನೇರವಾಗಿ ಸ್ಕ್ಯಾನ್ ಮಾಡಿ ನಿಮ್ಮ ತಾಣ ಅಥವಾ ಪ್ರೊಪೈಲ್ ಗೆ ಭೇಟಿ ನೀಡಬಹುದು.

ಕ್ಯೂ ಆರ್ ಕೋಡ್ ಅನ್ನು ನಿಮ್ಮ ವೆಬ್ ತಾಣಕ್ಕೆ ಮಾಡುವದು ತುಂಬಾ ಸುಲಭ. ಇದರಿಂದ ಲಾಭ ಏನು? ನಿಮ್ಮ ಗ್ರಾಹಕರು ನೇರವಾಗಿ ತಮ್ಮ ಫೋನ್ ಅಲ್ಲಿ ಸ್ಕ್ಯಾನ್ ಮಾಡಿ ನಿಮ್ಮ ತಾಣಕ್ಕೆ ಭೇಟಿ ನೀಡುವದು. ನಿಮ್ಮ ವೆಬ್ ವಿಳಾಸ ಟೈಪ್ ಮಾಡುವ ಶ್ರಮ ಉಳಿಯುತ್ತೆ. ತಪ್ಪು ವಿಳಾಸ ಬರೆದು ಒದ್ದಾಡುವದು ಸಾಧ್ಯತೆ ಕೂಡಾ ತಪ್ಪುತ್ತೆ.

ಉದಾಹರಣೆಗೆ ನಿಮ್ಮ ಕ್ಯಾಮೆರಾ ಎಪ್ ತೆರೆದು ಅದಕ್ಕೆ ಈ ಮುಂದಿನ ಕ್ಯೂ ಆರ್ ಕೋಡ್ ತೋರಿಸಿ. ಮಸ್ತಕಮಣಿ.ಕಾಂ ಲಿಂಕ್ ಕಾಣಿಸದಿದ್ದರೆ ಹೇಳಿ.

ಈ ಮುಂದಿನ ಸಲಹೆಗಳನ್ನು ಅನುಸರಿಸಿ ನೀವು ಆಡೋಬೆ ಅವರ ಉಚಿತ ಕ್ಯೂ ಆರ್ ಕೋಡ್ ತಯಾರಕ ಟೂಲ್ ಬಳಸಿ ನಿಮ್ಮದೇ ಕ್ಯೂ ಆರ್ ಕೋಡ್ ತಯಾರಿಸಿ ಕೊಳ್ಳಬಹುದು.

ಕ್ಯೂ ಆರ್ ಕೋಡ್ ಜನರೇಟರ್ ಆಯ್ಕೆ ಮಾಡಿ

ಹಲವಾರು ಉಚಿತ ಕ್ಯೂ ಆರ್ ಕೋಡ್ ಜನರೇಟರ್ ಲಭ್ಯ ಇದೆ. ನೀವು ಹಣ ನೀಡಬೇಕಿಲ್ಲ. ಮುಂದಿನ ಅಡೋಬೆ ಕ್ಯೂ ಆರ್ ಕೋಡ್ ಟೂಲ್ ತೆರೆಯಿರಿ.


(https://new.express.adobe.com/tools/generate-qr-code)


ನಿಮ್ಮ ವೆಬ್ ತಾಣದ ವಿಳಾಸ ಹಾಕಿ

ಲಿಂಕ್ ಟ್ಯಾಬ್ ಅಲ್ಲಿ ನಿಮ್ಮ ವೆಬ್ ತಾಣದ http:// ಅಥವಾ https:// ವಿಳಾಸ ಬರೆಯಿರಿ. ನೀವು ವಿಳಾಸ ಹಾಕಿದ ತಕ್ಷಣ ಕ್ಯೂ ಆರ್ ಕೋಡ್ ಚಿತ್ರ ತಯಾರಾಗುತ್ತದೆ.


ಕ್ಯೂ ಆರ್ ಕೋಡ್ ಚಿತ್ರದ ವಿನ್ಯಾಸ

ಕ್ಯೂ ಆರ್ ಕೋಡ್ ನ ಬಿಂದುಗಳ ವಿನ್ಯಾಸ, ಮಾರ್ಕರ್ ವಿನ್ಯಾಸ ಇತ್ಯಾದಿಗಳನ್ನು ನಿಮ್ಮ ಅಗತ್ಯದಂತೆ ಬದಲಾಯಿಸಬಹುದು. ಆದರೆ ಸಾಮಾನ್ಯವಾಗಿ ಚೌಕದ ಡಾಟ್ ಹಾಗೂ ಮಾರ್ಕರ್ ಗಳನ್ನು ಹೆಚ್ಚಿನ ಕಡೆ ಬಳಸಲಾಗುತ್ತದೆ.


ಕ್ಯೂ ಆರ್ ಕೋಡ್ ಚಿತ್ರದ ಬಣ್ಣ

ಕ್ಯೂ ಆರ್ ಕೋಡ್ ಚಿತ್ರದ ಬಣ್ಣ ಕೂಡಾ ಕಪ್ಪು, ನೀಲಿ, ಕೇಸರಿ, ಕೆಂಪು, ಹಸಿರು ಬಣ್ಣದ ಆಯ್ಕೆ ಇದೆ. ಆದರೆ ಹೆಚ್ಚಿನ ಕಡೆ ಕಪ್ಪು ಬಣ್ಣವನ್ನು ಬಳಸಲಾಗುತ್ತದೆ.


ಕ್ಯೂ ಆರ್ ಕೋಡ್ ಚಿತ್ರದ ಫೈಲ್ ಡೌನ್ ಲೋಡ್

ಅಂತಿಮವಾಗಿ ಕ್ಯೂ ಆರ್ ಕೋಡ್ ಚಿತ್ರವನ್ನು ಜೆಪಿಜಿ, ಪಿಎನ್ ಜಿ ಅಥವಾ ಎಸ್ ವಿ ಜಿ ಫೈಲ್ ಫಾರ್ಮಾಟ್ ಅಲ್ಲಿ ಡೌನ್ ಲೋಡ್ ಮಾಡಬಹುದು.

ನಿಮಗೆ ಡಿಟಿಪಿ ಬಳಕೆಗಾಗಿ ಆದರೆ ಎಸ್.ವಿ. ಜಿ ಫಾರ್ಮಾಟ್ ಸೂಕ್ತ.



ಹೀಗೆ ಡೌನ್ ಲೋಡ್ ಮಾಡಿದ ಕ್ಯೂ ಆರ್ ಕೋಡ್ ಅನ್ನು ನಿಮ್ಮ ಬ್ಯುಸಿನೆಸ್ ಕಾರ್ಡ್, ಕೆಟಾಲೋಗ್ ಅಥವಾ ಪತ್ರಿಕೆಗಳಲ್ಲಿ ಬಳಸಬಹುದು.

ಕೊನೆಯ ಮಾತು

ನಿಮ್ಮ ಬ್ಯುಸಿನೆಸ್ ಕಾರ್ಡ್ ಅಲ್ಲಿ ಕ್ಯೂ ಆರ್ ಕೋಡ್ ಬಳಸಿ ಗ್ರಾಹಕರು ಮೊಬೈಲ್ ಅಲ್ಲಿ ಸ್ಕ್ಯಾನ್ ಮಾಡಿ ನಿಮ್ಮ ವೆಬ್ ತಾಣ ತೆರೆಯುವ ಹಾಗೆ ಮಾಡಬಹುದು. ಇದರಿಂದ ಬ್ರೌಸರ್ ಓಪನ್ ಮಾಡಿ ನಿಮ್ಮ ವೆಬ್ ವಿಳಾಸ ಬರೆಯುವ ಶ್ರಮ ತಪ್ಪುತ್ತದೆ.

ತಪ್ಪದೇ ಓದಿ...

ವಿದೇಶ,ಬೆಂಗಳೂರು
©ಎಲ್ಲಾ ಹಕ್ಕುಗಳನ್ನು ಕಾದಿರಿಸಲಾಗಿದೆ. ಅನುಮತಿ ಇಲ್ಲದೇ ಲೇಖನಗಳನ್ನು ನಕಲು ಮಾಡುವಂತಿಲ್ಲ.
ಇದು ಮಸ್ತಕಮಣಿ.ಕಾಂ ಕೊಡುಗೆ